Mysore
22
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮಾರ್ಚ್‌ನಲ್ಲಿ ನೂತನ ಬಸ್‌ ನಿಲ್ದಾಣಕ್ಕೆ ಶಿಲಾನ್ಯಾಸ

ವಿರೋಧದ ನಡೆವೆಯೂ ಬನ್ನಿಮಂಟಪದಲ್ಲೇ ಬಸ್‌ ನಿಲ್ದಾಣ ನಿರ್ಮಿಸಲು ತೀರ್ಮಾನ

ಕೆ. ಬಿ. ರಮೇಶನಾಯಕ
ಮೈಸೂರು: ಸಬ್ ಅರ್ಬನ್ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಬಂದ ತೀವ್ರ ವಿರೋಧ ಹಾಗೂ ಒತ್ತಡಗಳ ನಡುವೆಯೂ ಈಗಾಗಲೇ ತೀರ್ಮಾನಿಸಿದಂತೆ ಬನ್ನಿಮಂಟಪದಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸುವ ಅಚಲ ನಿರ್ಧಾರ ತಳೆದಿರುವ ಸರ್ಕಾರ ಮಾರ್ಚ್‌ನಲ್ಲಿ ಶಂಕುಸ್ಥಾಪನೆಗೆ ತಯಾರಿ ನಡೆಸಿದೆ.

ನಗರದ ಮಧ್ಯಭಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.

ಭವಿಷ್ಯದ ಬಸ್‌ಗಳ ಕಾರ್ಯಾಚರಣೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣವಾಗುವ ಬಸ್ ನಿಲ್ದಾಣ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ. ಸಬ್ ಅರ್ಬನ್ ಬಸ್ ನಿಲ್ದಾಣವನ್ನು ಸ್ಥಳಾಂತರಿಸದಂತೆ ಸುತ್ತ ಮುತ್ತಲಿನ ವ್ಯಾಪಾರಿಗಳು ಇಟ್ಟಿದ್ದ ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಬನ್ನಿಮಂಟಪದಲ್ಲಿರುವ ನಿಗಮಕ್ಕೆ ಸೇರಿದ ಡಿಪೋ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸುವುದು ಖಚಿತವಾಗಿದೆ.

ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಕಾರ್ಯಾಚರಣೆ ಮಾಡುವ ಹಾಗೂ ಅಲ್ಲಿಂದ ಬರುವ ಬಸ್‌ಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇದರಿಂದ ಈಗಿರುವ ಬಸ್ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಸೂಕ್ತ ಜಾಗಕ್ಕಾಗಿ ಶೋಧ ನಡೆಸುತ್ತಿದ್ದ ನಿಗಮದ ಅಧಿಕಾರಿಗಳು ಬನ್ನಿಮಂಟಪ ದಲ್ಲಿರುವ ನಿಗಮದ ಜಾಗದಲ್ಲೇ ಸಮಗ್ರ ಸಾರಿಗೆ ವ್ಯವಸ್ಥೆ ಯನ್ನು ಕಲ್ಪಿಸಲು ರಾಜ್ಯಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಸರ್ಕಾರ ಈಗಾಗಲೇ ೧೨೯ ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ದಲ್ಲಿ ಅನುಮೋದನೆ ನೀಡಿದ್ದರಿಂದ ನಿಗಮದ ಕೇಂದ್ರ ಕಚೇರಿಯಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಏಜೆನ್ಸಿ ನಿಗದಿ ಯಾಗುತ್ತಿದ್ದಂತೆ ಕಾಮಗಾರಿ ಶುರುವಾಗಲಿದ್ದು, ಮಾರ್ಚ್ ಒಳಗೆ ಶಂಕುಸ್ಥಾಪನೆಯೂ ನಡೆಯಲಿದೆ ಎಂದು ಹೇಳಲಾಗಿದೆ.

ಅತ್ಯಾಧುನಿಕ ಶೈಲಿಯ ನಿಲ್ದಾಣ: ಹುಬ್ಬಳ್ಳಿಯ ಶಶಿ ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್‌ನವರು ನೂತನ ಬಸ್ ನಿಲ್ದಾಣದ ವಿನ್ಯಾಸವನ್ನು ತಯಾರಿಸಿದ್ದು, ೬ ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳುವ ನಿಲ್ದಾಣದ ನೆಲಮಾಳಿಗೆ ಯಲ್ಲಿ ಒಂದು ಸಾವಿರ ಬೈಕ್‌ಗಳು, ೫೦೦ ಕಾರುಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನೆಲ ಅಂತಸ್ತಿನಲ್ಲಿ ೭೫ ಬಸ್‌ಗಳ ನಿಲುಗಡೆಗೆ ಅವಕಾಶ, ಭವಿಷ್ಯ ದಲ್ಲಿ ವಿದ್ಯುತ್‌ಚಾಲಿತ ಬಸ್‌ಗಳು ಸಂಚಾರ ಮಾಡುವ ಕಾರಣಕ್ಕಾಗಿ ೩೦ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸ ಲಾಗುತ್ತದೆ.

ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ೨೫ ಬಸ್‌ಗಳು ಮಾತ್ರ ನಿಲುಗಡೆಗೆ ಅವಕಾಶವಿದ್ದರೆ, ಇಲ್ಲಿ ಏಕಕಾಲದಲ್ಲಿ ೭೫ಬಸ್‌ಗಳು ನಿಲುಗಡೆ ಮಾಡಬಹುದಾಗಿರುವ ಕಾರಣ ಕಾಯ್ದಿರಿಸುವಿಕೆ ಬಸ್ ಗಳನ್ನು ಹೆಚ್ಚಿನ ಮಟ್ಟದಲ್ಲಿ ಕಾರ್ಯಾಚರಣೆಗೆ ಬಳಸಬಹುದಾಗಿದೆ ಎಂದು ಹೇಳಲಾಗಿದೆ.

ಬನ್ನಿಮಂಟಪದ ಡಿಪೋ ಜಾಗದಲ್ಲಿ ಅತ್ಯಾಧುನಿಕ ಶೈಲಿಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಒಪ್ಪಿಗೆ ದೊರೆತು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಈಗಿರುವ ಬಸ್ ನಿಲ್ದಾಣ ಕಿಷ್ಕಿಂದೆಯಾಗಿರುವ ಕಾರಣ ಹೊಸ ನಿಲ್ದಾಣ ಅನಿವಾರ್ಯವಾಗಿದೆ. ಯಾವುದೇ ಯೋಜನೆಗೆ ಪರ- ವಿರೋಧ ಸಹಜ. -ಶ್ರೀನಿವಾಸ್, ಡಿಸಿ, ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗ.

Tags:
error: Content is protected !!