ಪುನೀತ್ ಮಡಿಕೇರಿ
ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ
ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ ಹಬ್ಬದ ಆಕರ್ಷಣೆಯಾದ ಕರಗ ಉತ್ಸವಗಳು ಹಾಗೂ ದಶಮಂಟಪಗಳು ಸಾಗುವ ರಸ್ತೆ ಗುಂಡಿಗಳಿಂದ ಆವೃತವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ನಗರದ ಇತಿಹಾಸ ಪ್ರಸಿದ್ಧ ೪ ಶಕ್ತಿ ದೇವತೆಗಳ ಕರಗಗಳನ್ನು ಮಹದೇವಪೇಟೆಯ ಪಂಪಿನ ಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಾಗುತ್ತದೆ. ನಂತರ ದಸರಾ ಜನೋತ್ಸವದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಕರಗ ಹೊತ್ತು, ನೃತ್ಯ ಮಾಡುತ್ತ ಪ್ರತಿಮನೆಗೆ ತೆರಳುತ್ತಾರೆ. ಆದರೆ, ಕರಗ ಹೊರುವವರು ಬರಿಗಾಲಿನಲ್ಲಿ ನಡೆಯುವ ಪರಿಣಾಮ ಹೇಗೆ ಪ್ರದಕ್ಷಿಣೆ ಹಾಕುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ಮಂಟಪಕ್ಕೆ ಗುಂಡಿಗಳ ಸವಾಲು: ವಿಜಯದಶಮಿಯಂದು ವೈಭವಯುತ ದಶಮಂಟಪಗಳ ಮೆರವಣಿಗೆ ನಡೆಯಲಿದೆ. ಗುಂಡಿಗಳು ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿರುವುದರಿಂದ ಮಂಟಪಗಳನ್ನು ಕೊಂಡೊಯ್ಯುವುದೂ ಕೂಡ ಸವಾಲಾಗಿ ಪರಿಣಮಿಸಲಿದೆ. ಸದ್ಯ ಮಳೆ ಕೂಡ ಬಿಡುವು ನೀಡಿದ್ದು, ಶೀಘ್ರವಾಗಿ ರಸ್ತೆ ದುರಸ್ತಿ ಮಾಡಬೇಕಾಗಿದೆ. ನಗರದ ಬಹುತೇಕ ಎಲ್ಲ ರಸ್ತೆಗಳಲ್ಲೂ ಗುಂಡಿಗಳೇ ಗೋಚರಿಸುತ್ತಿವೆ. ಮಳೆಗಾಲ ಕಳೆಯುತ್ತಾ ಬಂದಿದೆ. ಕೆಲವೆಡೆ ಮಳೆಯ ನೀರು ನಿಂತು ರಸ್ತೆಗಳು ಹಾಳಾಗಿವೆ.
ಗುಂಡಿಬಿದ್ದ ರಸ್ತೆಯಲ್ಲೇ ಶೋಭಾಯಾತ್ರೆ!: ಇಲ್ಲಿನ ಐತಿಹಾಸಿಕ ರಾಜಾಸೀಟ್ ಉದ್ಯಾನದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ದಸರಾ ವೇಳೆಗೆ ಪೂರ್ಣಗೊಳಿಸುವುದು ಕಷ್ಟಕರವಾಗಿದೆ. ಪರಿಣಾಮ ಹಳೆಯ ರಸ್ತೆಯ ದಸರೆಯ ದಶಮಂಟಪಗಳ ಶೋಭಾಯಾತ್ರೆ ನಡೆಯುವುದು ಬಹುತೇಕ ನಿಶ್ಚಿತ ಎನಿಸಿದೆ. ನಿರಂತರವಾಗಿ ಮಳೆ ಇದ್ದುದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ಮಳೆ ನಿಂತ ನಂತರ ಕಾಮಗಾರಿ ಆರಂಭವಾಯಿತಾದರೂ ಅದಕ್ಕೆ ಹಲವು ತೊಡಕುಗಳು ಎದುರಾದವು. ಹೀಗಾಗಿ, ಆ.೧೪ ರಂದು ಆರಂಭವಾದ ೧.೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೇ ನಿಂತಿದೆ. ಜಾಲತಾಣಗಳಲ್ಲೂ ರಾಜಾಸೀಟ್ಗೆ ತೆರಳುವ ರಸ್ತೆ ದುಸ್ಥಿತಿಯ ಬಗ್ಗೆ ಆಕ್ರೋಶ: ಸಾಮಾಜಿಕ ಜಾಲತಾಣ ಗಳಲ್ಲಿಯೂ ರಾಜಾಸೀಟ್ಗೆ ತೆರಳುವ ರಸ್ತೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅವರು ನಗರಕ್ಕೆ ಬಂದಾಗ ಮಣ್ಣು ಹಾಕಿ ರಸ್ತೆಯನ್ನು ದುರಸ್ತಿಪಡಿಸುವ ಕಾರ್ಯ ಆರಂಭವಾಗಿತ್ತು. ಅವರು ಹೋದ ಕೂಡಲೇ ಕಾಮಗಾರಿಯನ್ನು ನಿಲ್ಲಿಸಲಾಯಿತು ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಜಿಡಳಿತ ಭವನ, ವಿಶ್ವ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್ ಇದೇ ರಸ್ತೆಯ ಇದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿ ಸಂಚರಿಸುತ್ತಾರೆ. ಇಂತಹ ರಸ್ತೆಯ ಸ್ಥಿತಿ ಕಂಡು ಎಲ್ಲರೂ ಬೇಸರಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
” ನಗರದ ಎಲ್ಲಾ ರಸ್ತೆಗಳು ಬಹುತೇಕ ಹಾಳಾಗಿವೆ. ಕಾಟಾಚಾರಕ್ಕೆ ಗಾಂಧಿ ಮಂಟಪ ಮುಂಭಾಗ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ ಮಾಡಲಾಗಿತ್ತು. ತರಾತುರಿಯಲ್ಲಿ ಮಣ್ಣು ಅಗೆದು ಜಲ್ಲಿ ಹಾಕಿ ಸಮತಟ್ಟು ಮಾಡಲಾಗಿದ್ದು, ಕಾಮಗಾರಿ ಅರ್ಧಕ್ಕೇ ನಿಂತಿರುವುದರಿಂದ ವಾಹನ ಸವಾರರು ನಗರಸಭೆಗೆ ಹಿಡಿಶಾಪ ಹಾಕುವಂತಾಗಿದೆ. ಅಕ್ಟೋಬರ್ನಲ್ಲಿ ಮಡಿಕೇರಿ ದಸರಾ ಜನೋತ್ಸವ ಜರುಗಲಿದ್ದು, ಆದಷ್ಟು ಶೀಘ್ರದಲ್ಲಿ ಕರಗ ಮತ್ತು ಶೋಭಾಯಾತ್ರೆ ಸಾಗುವ ರಸ್ತೆಯನ್ನು ದುರಸ್ತಿಗೊಳಿಸಬೇಕು.”
– ಜೆ.ರವಿಗೌಡ, ಅಧ್ಯಕ್ಷರು, ಕೊಡಗು ಹಿತರಕ್ಷಣಾ ವೇದಿಕೆ
” ನಗರದಲ್ಲಿ ಸಣ್ಣಪುಟ್ಟ ರಸ್ತೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಸಂಪೂರ್ಣವಾಗಿ ರಸ್ತೆ ಅಭಿವೃದ್ಧಿ ಮಾಡಲು ಹೆಚ್ಚಿನ ಅನುದಾನ ಅಗತ್ಯ. ಆದರೆ, ನಗರಸಭೆಯಲ್ಲಿ ಅನುದಾನದ ಕೊರತೆಯಿದೆ. ರಸ್ತೆ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆದಷ್ಟು ಶೀಘ್ರದಲ್ಲಿ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು.”
ಪಿ.ಕಲಾವತಿ, ಅಧ್ಯಕ್ಷರು, ನಗರಸಭೆ
ಎಲ್ಲಿ ರಸ್ತೆ ಸಮಸ್ಯೆ?:
ಮಡಿಕೇರಿ: ನಗರದ ಓಂಕಾರೇಶ್ವರ ದೇವಾಲಯ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪ, ಹೊಸ ಬಡಾವಣೆ, ರಾಣಿಪೇಟೆ, ಮಲ್ಲಿಕಾರ್ಜುನ ನಗರ, ಗೌಳಿಬೀದಿ, ವೈವಾಸ್ ಆಸ್ಪತ್ರೆ ಸಮೀಪ, ವಿದ್ಯಾನಗರ, ಎಲ್ಐಸಿ ರಸ್ತೆ, ಹಿಲ್ ರಸ್ತೆ, ಹಿಂದೂಸ್ಥಾನಿ ಶಾಲೆಗೆ ತೆರಳುವ ರಸ್ತೆ, ಜೂನಿಯರ್ ಕಾಲೇಜುರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳು ಹಾನಿಯಾಗಿವೆ. ರಸ್ತೆಗಳ ದುರಸ್ತಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.



