ಸುಧಾ ಆಡುಕಳ
ನಾಗರಿಕತೆ ಎಂದರೇನು?
ನಾನೀಗ ನಿನಗೆ ಪ್ರಾಚೀನ ನಾಗರಿಕತೆಯ ಬಗ್ಗೆ ಹೇಳುತ್ತೇನೆ. ಅದಕ್ಕಿಂತ ಮೊದಲು ನಾವು ನಾಗರಿಕತೆ ಯೆಂದರೇನು ಎಂಬ ಬಗ್ಗೆ ಸ್ವಲ್ಪ ತಿಳಿ ದಿರಬೇಕು. ಶಬ್ದಕೋಶವನ್ನು ಹುಡುಕಿದರೆ ನಾಗರಿಕರಾಗುವುದು ಎಂಬುದಕ್ಕೆ ಉತ್ತಮ ಗೊಳ್ಳುವುದು, ಪರಿಷ್ಕರಣೆಗೊಳ್ಳುವುದು, ಹಳೆಯ ಕೆಟ್ಟ ಅಭ್ಯಾಸಗಳನ್ನು ಒಳ್ಳೆಯದಕ್ಕೆ ಬದಲಾಯಿಸಿಕೊಳ್ಳುವುದು ಎಂಬ ಅರ್ಥವಿದೆ. ಇದು ಮುಖ್ಯವಾಗಿ ಸಮಾಜದ ಬಗ್ಗೆ, ಅಂದರೆ ಜನರ ಗುಂಪಿನ ಬಗ್ಗೆ ಹೇಳುತ್ತದೆ. ಮನುಷ್ಯನು ಪ್ರಾಣಿಗಳಿಗಿಂತ ಭಿನ್ನವಾಗಿ ಗುರುತಿಸಿ ಕೊಂಡ ಪ್ರಾರಂಭಿಕ ಕಾಲದಲ್ಲಿ ಅವನಲ್ಲಿದ್ದ ಅನಾಗರಿಕ ವರ್ತನೆಗಳನ್ನು ಅಸಂಸ್ಕ ತ ವರ್ತನೆಗಳೆಂದು ಕರೆಯುತ್ತಾರೆ. ನಾಗರಿಕತೆಯೆಂಬುದು ಇದರ ವಿರುದ್ಧವಾದ ಪರಿಕಲ್ಪನೆಯಾಗಿದೆ. ಕಾಲ ಕಳೆದಂತೆ ಮನುಷ್ಯರು ಅನಾಗರಿಕ ವರ್ತನೆಗಳನ್ನು ಬದಲಾಯಿಸಿಕೊಂಡು ನಾಗರಿಕರಾಗುತ್ತಾ ನಡೆದರು.
ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜವನ್ನು ಅನಾಗರಿಕವೋ ಅಥವಾ ನಾಗರಿಕವೋ ಎಂದು ಗುರುತಿಸುವುದು ಹೇಗೆ? ಯುರೋಪಿನ ಅನೇಕರು ತಾವು ನಾಗರಿಕರೆಂದು ಮತ್ತು ಏಷಿಯಾದ ಜನರು ಸ್ವಲ್ಪಮಟ್ಟಿಗೆ ಅನಾಗರಿಕ ರೆಂದು ಯೋಚಿಸುತ್ತಾರೆ. ಅವರು ಏಷಿಯಾ ಅಥವಾ ಆಫ್ರಿಕಾದ ಜನರಿಗಿಂತ ಹೆಚ್ಚು ಬಟ್ಟೆಗಳನ್ನು ಧರಿಸುತ್ತಾರೆಂಬುದು ಇದಕ್ಕೆ ಕಾರಣವಾಗ ಬಲ್ಲದೆ? ಆದರೆ ಬಟ್ಟೆಯನ್ನು ಧರಿಸುವ ಪ್ರಮಾಣವು ಆ ಪ್ರದೇಶದ ಹವಾಮಾನವನ್ನು ಅವಲಂಬಿಸಿದೆ. ಶೀತಪ್ರದೇಶದಲ್ಲಿ ವಾಸಿಸುವವರು ಸಹಜವಾಗಿಯೇ ಬೆಚ್ಚಗಿನ ವಾತಾವರಣದಲ್ಲಿ ವಾಸಿಸುವವರಿಗಿಂತ ಹೆಚ್ಚು ಬಟ್ಟೆಗಳನ್ನು ಧರಿಸುತ್ತಾರೆ. ಅಥವಾ ಬಂದೂಕುಗಳನ್ನು ಹೊಂದಿರುವ ಮನು ಷ್ಯರು ಇತರ ಆಯುಧಗಳನ್ನು ಹೊಂದಿರುವ ಮನುಷ್ಯರಿಗಿಂತ ಬಲಶಾಲಿಗಳು ಮತ್ತು ಅದರಿಂದಾಗಿ ಅವರು ಹೆಚ್ಚು ನಾಗರಿಕರಾಗುತ್ತಾರೆಯೆ? ಕೆಲವೇ ವರ್ಷಗಳ ಹಿಂದೆ ಒಂದು ಮಹಾಯುದ್ಧವಾದ ಬಗ್ಗೆ ನಿನಗೆ ತಿಳಿದಿರಬಹುದು. ಜಗತ್ತಿನ ಅನೇಕ ರಾಷ್ಟ್ರಗಳು ಇದರಲ್ಲಿ ಭಾಗಿಯಾಗಿದ್ದವು ಮತ್ತು ಪ್ರತಿಯೊಬ್ಬರೂ ಕೂಡ ತಮ್ಮ ಎದುರಾಳಿ ದೇಶಗಳ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಆಂಗ್ಲರು ಹೆಚ್ಚು ಹೆಚ್ಚು ಜರ್ಮನ್ನರನ್ನು ಕೊಲ್ಲಲು ಹವಣಿಸುತ್ತಿದ್ದರು.
ಜರ್ಮನ್ನರು ಆಂಗ್ಲರನ್ನು ಕೊಲ್ಲುತ್ತಿದ್ದರು. ಮಿಲಿಯನ್ಗಟ್ಟಲೆ ಜನರು ಈ ಯುದ್ಧದಲ್ಲಿ ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡರು, ಕೆಲವರು ಕಣ್ಣನ್ನು ಕಳೆದುಕೊಂಡು ಕುರುಡರಾದರು, ಇನ್ನು ಕೆಲವರು ಕೈ ಕಾಲು ಗಳನ್ನು ಕಳೆದುಕೊಂಡರು. ಹೀಗೆ ಯುದ್ಧದಲ್ಲಿ ಗಾಯಗೊಂಡ ಅನೇಕರನ್ನು ನೀನು ಫ್ರಾನ್ಸಿನಲ್ಲಿ ಎಲ್ಲೆಂದರಲ್ಲಿ ನೋಡಿರುವೆ ಯಲ್ಲವೆ? ಪ್ಯಾರಿಸ್ಸಿನ ರೇಲ್ವೆ ಗಳಲ್ಲಿ ಮತ್ತು ಮೆಟ್ರೋಗಳಲ್ಲಿ ಇವರಿಗೆಂದೇ ಕೆಲವು ಸೀಟುಗಳನ್ನು ಮೀಸಲಾಗಿರಿಸಿದ್ದಾರೆ.
ಹೀಗೆ ಯುದ್ಧದಲ್ಲಿ ಒಬ್ಬರನ್ನೊಬ್ಬರು ಕೊಲ್ಲುವುದನ್ನು ನೀನು ನಾಗರಿಕತೆ ಮತ್ತು ಸೂಕ್ಷ್ಮ ಸಂವೇದನೆಯೆಂದು ಭಾವಿಸುವೆಯಾ? ಇಬ್ಬರು ಬೀದಿಯಲ್ಲಿ ನಿಂತು ಜಗಳವಾಡುತ್ತಿದ್ದರೆ ಪೊಲೀಸರು ಹೋಗಿ ಜಗಳವನ್ನು ಬಿಡಿಸುತ್ತಾರೆ ಮತ್ತು ಉಳಿದವರೆಲ್ಲರೂ ಜಗಳವಾಡುತ್ತಿರುವವರನ್ನು ಮೂರ್ಖರೆಂದು ಭಾವಿಸುತ್ತಾರೆ. ಹೀಗಿರುವಾಗ ದೇಶದೇಶಗಳು ತಮ್ಮತಮ್ಮಲ್ಲಿ ಜಗಳವಾಡುವುದು ಮತ್ತು ಸಾವಿರಾರು ಜನರ ಸಾವಿಗೆ ಕಾರಣವಾಗುವುದು ಮೂರ್ಖತನವಲ್ಲದೆ ಇನ್ನೇನು? ಇದು ಎರಡು ಅನಾಗರಿಕ ಗುಂಪುಗಳು ಕಾಡಿನಲ್ಲಿ ಕಾಳಗಕ್ಕೆ ನಿಂತಷ್ಟೇ ಮೂರ್ಖತನವಾಗಿದೆ. ಅವರನ್ನು ನಾವು ಅನಾಗರಿಕರೆಂದು ಕರೆಯುವುದಾದರೆ ಈ ದೇಶಗಳು ಇನ್ನೆಷ್ಟು ಅನಾಗರಿಕವಾಗಿರಬೇಕು ಅಲ್ಲವೆ?
ನೀನು ನಾಗರಿಕತೆಯ ಬಗ್ಗೆ ಈ ರೀತಿಯ ಒಳನೋಟಗಳನ್ನು ಬೆಳೆಸಿಕೊಂಡಾಗ ತಮ್ಮತಮ್ಮಲ್ಲಿ ಯುದ್ಧ ಮಾಡಿಕೊಂಡು ಅನೇಕರ ಸಾವಿಗೆ ಕಾರಣವಾದ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮೊದಲಾದ ದೇಶಗಳು ನಿಜವಾಗಿಯೂ ನಾಗರಿಕವಾಗಿಲ್ಲವೆಂದು ಅರ್ಥವಾಗುತ್ತದೆ. ಆದಾಗ್ಯೂ ಈ ದೇಶಗಳಲ್ಲಿ ಅನೇಕ ಒಳ್ಳೆಯ ಸಂಗತಿಗಳು ಮತ್ತು ಒಳ್ಳೆಯ ವ್ಯಕ್ತಿಗಳು ಇದ್ದಾರೆಂಬುದನ್ನು ಮರೆಯಬಾರದು.
ನಾಗರಿಕತೆಯೆಂದರೇನೆಂದು ಅರ್ಥೈಸಿಕೊಳ್ಳುವುದು ಬಹಳ ಕಠಿಣವೆಂದು ಈಗ ನಿನಗನಿಸಿದರೆ, ನಿನ್ನ ಯೋಚನೆಯು ಸರಿಯಾಗಿಯೇ ಇದೆ. ನಿಜಕ್ಕೂ ಇದೊಂದು ಕಷ್ಟದ ಪ್ರಶ್ನೆಯೇ ಆಗಿದೆ. ಚಂದದ ಕಟ್ಟಡಗಳು, ಸುಂದರವಾದ ಚಿತ್ರಗಳು ಒಳ್ಳೆಯ ಪುಸ್ತಕಗಳು ಮತ್ತು ಸುಂದರವಾಗಿರುವ ಎಲ್ಲವೂ ನಾಗರಿ ಕತೆಯ ಸಂಕೇತಗಳೇ ಆಗಿವೆ. ಆದರೆ ಇದಕ್ಕಿಂತ ಒಳ್ಳೆಯ ಸಂಕೇತಗಳೆಂದರೆ ನಿಸ್ವಾರ್ಥದಿಂದ ಎಲ್ಲರ ಒಳಿತಿಗಾಗಿ ದುಡಿಯುವ ಸುಂದರ ಮನಸ್ಸುಳ್ಳ ಮನುಷ್ಯರು. ಒಬ್ಬನೇ ಕೆಲಸ ಮಾಡುವುದಕ್ಕಿಂತ ಒಟ್ಟಿಗೆ ಕೆಲಸ ಮಾಡುವುದು ಉತ್ತಮ ಮತ್ತು ಒಂದು ಒಳ್ಳೆಯ ಉದ್ಧೇಶಕ್ಕಾಗಿ ಒಟ್ಟಾಗಿ ಹೋರಾಡುವುದು ಅತ್ಯುತ್ತಮವಾದ ಸಂಗತಿಯಾಗಿದೆ.
” ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರಿಗೆ ಮಕ್ಕಳ ಬಗೆಗಿದ್ದ ಪ್ರೀತಿ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಮಗಳು ಇಂದಿರಾಳ ಮನೋವಿಕಾಸದ ಬಗ್ಗೆ ಅವರಿಗೆ ಅಪಾರವಾದ ಕಾಳಜಿಯಿತ್ತು. ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ವ್ಯಸ್ತರಾಗಿದ್ದರೂ ಮಗಳಿಗಾಗಿ ಸಮಯವನ್ನು ಮೀಸಲಿಡುವುದನ್ನು ಅವರು ಮರೆಯುತ್ತಿರಲಿಲ್ಲ. ಹೋರಾಟ ಮತ್ತು ಜೈಲಿನಲ್ಲಿರುವ ಸಮಯದಲ್ಲಿಯೂ ಪತ್ರಗಳ ಮೂಲಕ ಅವರು ಮಗಳೊಂದಿಗಿನ ತಮ್ಮ ಸಂವಹನವನ್ನು ಚಾಲ್ತಿಯಲ್ಲಿಡುತ್ತಿದ್ದರು. ಹೀಗೆ ಅವರು ಬರೆದ ಪತ್ರಗಳು ‘ಇಂದಿರೆಗೆ ಪತ್ರಗಳು’ ಎಂಬ ಹೆಸರಿನಿಂದ ಪ್ರಕಟವಾಗಿವೆ. ಈ ಪತ್ರಗಳನ್ನು ಅವರು ೧೯೨೮ರಲ್ಲಿ ಇಂದಿರೆ ಹಿಮಾಲಯದ ಮಸ್ಸೂರಿಯಲ್ಲಿ ಬೇಸಿಗೆ ರಜೆಯನ್ನು ಕಳೆಯಲು ಹೋದ ಸಮಯದಲ್ಲಿ ಬರೆದಿದ್ದರು. ಆಗ ಇಂದಿರೆಗೆ ಹತ್ತರ ಪ್ರಾಯ. ಈ ಪತ್ರಗಳನ್ನು ಓದುವ ಮಗಳು ನಿಧಾನವಾಗಿ ಇಡಿಯ ಜಗತ್ತನ್ನು ಅನೇಕ ದೇಶಗಳಿಂದ ಕೂಡಿದ ಒಂದು ಕುಟುಂಬವೆಂದು ಯೋಚಿಸಲು ಕಲಿಯುತ್ತಾಳೆ ಎಂಬುದು ಅವರ ನಿರೀಕ್ಷೆಯಾಗಿತ್ತು. ಭೂಮಿ ಹುಟ್ಟಿದ ಕಾಲದಿಂದ ಮನುಷ್ಯನಿಗೆ ತನ್ನ ಬಗ್ಗೆ ಅರಿವು ಮೂಡಿದ ಕಾಲದವರೆಗಿನ ಕಥೆಯನ್ನು ಈ ಪತ್ರಗಳು ಹೇಳುತ್ತವೆ. ಹಾಗಾಗಿ ಇವು ತಂದೆಯೊಬ್ಬ ಮಗಳಿಗೆ ಬರೆದ ಪತ್ರ ಮಾತ್ರವಾಗಿರದೇ ಪ್ರಕೃತಿಯೆಂಬ ಪುಸ್ತಕವನ್ನು ಓದಲು ತಿಳಿಸಿಕೊಡುವ ಮತ್ತು ನಾಗರಿಕತೆಯ ಉಗಮವನ್ನು ಅರ್ಥಮಾಡಿಕೊಳ್ಳಲು ಮಗುವಿಗೆ ಕಲಿಸುವ ಬಾಲಪಾಠಗಳೂ ಆಗಿವೆ. ಆ ಪತ್ರಗಳ ಸಂಕಲನದಿಂದ ಆಯ್ದ ಪತ್ರವೊಂದನ್ನು ಇಲ್ಲಿ ನೀಡಲಾಗಿದೆ”




