ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು
ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಆಶಯದೊಂದಿಗೆ ಮಂಡ್ಯದಮಿಮ್ಸ್‌ನಲ್ಲಿ ಸ್ಥಾಪನೆಯಾಗಿರುವ ಟರ್ಷಿಯರಿ ಕ್ಯಾನ್ಸರ್ ಕೇರ್ ಸೆಂಟರ್ ಇನ್ನೂ ಕಾರ್ಯಾರಂಭವಾಗಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಅನುದಾನ ಬಿಡುಗಡೆ ವಿಳಂಬದಿಂದಾಗಿ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇದರಿಂದ ಕ್ಯಾನ್ಸರ್ ರೋಗಿಗಳು ಸರಿಯಾಗಿ ಚಿಕಿತ್ಸೆ ದೊರೆಯದೆ ನರಕ ಯಾತನೆ ಅನುಭವಿಸುವಂತಾಗಿದೆ.
೨೦೨೪ರ ಜನವರಿಯಲ್ಲೇ ಟರ್ಷಿಯರಿ ಕ್ಯಾನ್ಸರ್ ಕೇರ್ ಉದ್ಘಾಟನೆಯಾಗಬೇಕಿತ್ತು. ಆದರೆ, ಕೇಂದ್ರ ಮತ್ತು ರಾಜ್ಯದಿಂದ ಬಾಕಿ ಅನುದಾನ ಬಿಡುಗಡೆ ತಡವಾಗಿದ್ದರಿಂದ ಕಾಮಗಾರಿ ಇನ್ನೂ ಮುಗಿದಿಲ್ಲ. ಕಳೆದ ವಾರಬಾಕಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ. ಪೆರಿಫರಲ್ ಕ್ಯಾನ್ಸರ್ ಕೇಂದ್ರವನ್ನು ಟರ್ಷಿಯರಿ ಕ್ಯಾನ್ಸರ್ ಕೇರ್ ಕೇಂದ್ರವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದರೂ ಅನುದಾನದ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಪ್ರಾಣ ಹಿಂಡುವ ನೋವು ಅನುಭವಿಸುತ್ತಿರುವ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಗುಣಮಟ್ಟದ ಚಿಕಿತ್ಸೆಗಾಗಿ ದೂರದ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯಬೇಕಿದೆ.
ಪ್ರಸ್ತುತ ನಗರದ ಕ್ಯಾನ್ಸರ್ ಕೇಂದ್ರದಲ್ಲಿ ಕ್ಯಾನ್ಸರ್ ಸಂಬಂಧಿಸಿದ ಕನಿಷ್ಠ ಪರೀಕ್ಷೆಗಳು, ಶಸ್ತ್ರಚಿಕಿತ್ಸೆ ಸೌಲಭ್ಯವಷ್ಟೇ ದೊರೆಯುತ್ತಿದೆ. ವೈದ್ಯರಿಲ್ಲದ ಕಾರಣ ಕ್ಯಾನ್ಸರ್‌ಗೆ ಚಿಕಿತ್ಸೆ ಸೇರಿದಂತೆ ಕಿಮೋಥೆರಪಿ, ವಿಕಿರಣ ಚಿಕಿತ್ಸೆ (ರೇಡಿಯೇಷನ್ ಆಂಕಾಲಜಿ) ಯಾವುದೂ ದೊರೆಯುತ್ತಿಲ್ಲ. ಹೀಗಾಗಿ ಜನರು ಪ್ರಾಥಮಿಕ, ಉನ್ನತ ಮಟ್ಟದ ಚಿಕಿತ್ಸೆಗಾಗಿ ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಅಥವಾ ಖಾಸಗಿಮ ಆಸ್ಪತ್ರೆಗಳಿಗೆ ಹೋಗಬೇಕಿದೆ.
ಇದನ್ನು ಓದಿ: ಸಿಎಂಗೆ ವಿದ್ಯಾರ್ಥಿಗಳು ಪತ್ರ ಬರೆದ ಪ್ರಕರಣ: ಪಚ್ಚೆದೊಡ್ಡಿ ಸರ್ಕಾರಿ ಶಾಲೆಗೆ ಬಿಇಒ ಭೇಟಿ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಮಿಮ್ಸ್) ಬೋಧಕ ಆಸ್ಪತ್ರೆಆವರಣದಲ್ಲಿ ೧೯೯೪ರಲ್ಲಿ ಪೆರಿಫರಲ್ ಕ್ಯಾನ್ಸರ್ ಕೇಂದ್ರ ಸ್ಥಾಪನೆಯಾಗಿತ್ತು. ೨೦೧೬-೧೭ರಲ್ಲಿ ಟರ್ಷಿಯರಿ ಕೇರ್ ಕ್ಯಾನ್ಸರ್ ಕೇಂದ್ರವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಕೇಂದ್ರದಿಂದ ೨೭ ಕೋಟಿ ರೂ. (ಶೇ.೬೦), ರಾಜ್ಯ ಸರ್ಕಾರದಿಂದ ೧೮ ಕೋಟಿ ರೂ. (ಶೇ.೪೦) ಸೇರಿದಂತೆ ಒಟ್ಟು ೪೫ ಕೋಟಿ ರೂ. ಅನುದಾನವೂ ಮಂಜೂರಾಗಿತ್ತು. ಕಟ್ಟಡ ನಿರ್ಮಾಣ, ಇತರೆ ಸಿವಿಲ್ ಕಾಮಗಾರಿಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ಹಣವನ್ನು ಪ್ರತ್ಯೇಕಿಸಿ ಮೀಸಲಿಡಲಾಗಿತ್ತು. ಅದರಂತೆ ೨೦೧೮ರಲ್ಲಿ ಪೆರಿಫರಲ್ ಕ್ಯಾನ್ಸರ್ ಕೇಂದ್ರದ ಪಕ್ಕದಲ್ಲಿನ ಖಾಲಿ ನಿವೇಶನದಲ್ಲಿ ಟರ್ಷಿಯರಿ ಕ್ಯಾನ್ಸರ್ ಕೇರ್ ಕೇಂದ್ರಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಕಳೆದ ಏಳು ವರ್ಷಗಳಿಂದ ಈ ಕಾಮಗಾರಿ ಕುಂಟುತ್ತಾ ಸಾಗಿದೆ.
ಆರಂಭದಲ್ಲಿ ಕೇಂದ್ರದಿಂದ ೧೭.೨೫ ಕೋಟಿ ರೂ., ರಾಜ್ಯದಿಂದ ೧೨.೭೬ ಕೋಟಿ ರೂ. ಸೇರಿದಂತೆ ಒಟ್ಟು ೩೦.೦೨ ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ಈವರೆಗೆ ನಡೆದಿರುವ ಸಿವಿಲ್ ಕಾಮಗಾರಿಗಾಗಿ ೧೧.೫೫ ಕೋಟಿ ರೂ., ಉಪಕರಣಗಳ ಖರೀದಿಗಾಗಿ ೧೮.೩೯ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ೭.೭೬ ಲಕ್ಷ ರೂ. ಬಾಕಿ ಉಳಿದಿದೆ.
ಎರಡು ವರ್ಷಗಳ ಹಿಂದೆ ಸಿವಿಲ್ ಕಾಮಗಾರಿಗಾಗಿ ಇನ್ನೂ ೫ ಕೋಟಿ ರೂ. ಅನುದಾನ ಬೇಕಿದ್ದರಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದರು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಿತ್ತು. ಈ ಬಗ್ಗೆ ಹತ್ತಾರು ಸಂಘಟನೆಗಳು, ಸಾರ್ವಜನಿಕರು ಸರ್ಕಾರದ ಗಮನ ಸೆಳೆಯುವ ಪ್ರಯತ್ನಮಾಡಿದ್ದರು. ಪರಿಣಾಮ ಇತ್ತೀಚೆಗೆ ಕೇಂದ್ರದಿಂದ ೯.೭೪ ಕೋಟಿ ರೂ., ರಾಜ್ಯದಿಂದ೫.೨೩ ಕೋಟಿ ರೂ. ಬಿಡುಗಡೆಯಾಗಿದ್ದು, ಅದು ಡಿಎಂಇ(ಡೈರೆಕ್ಟರ್ ಆಫ್ ಮೆಡಿಕಲ್]ಎಜುಕೇಷನ್) ಖಾತೆಯಲ್ಲಿದೆ. ಇದರೊಂದಿಗೆ ರಾಜ್ಯ ಸರ್ಕಾರದಿಂದ ಬೇಡಿಕೆಯಂತೆ ೫.೬೫ ಕೋಟಿ ರೂ. ಹೆಚ್ಚು ಅನುದಾನವೂ ಬಿಡುಗಡೆಯಾಗಿದೆ.
” ಟರ್ಷಿಯರಿ ಕ್ಯಾನ್ಸರ್ ಕೇರ್ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ಬಾಕಿ ಅನುದಾನ ಬಿಡುಗಡೆಯಾಗಿದೆ. ಅಗತ್ಯವಾದ ಯಂತ್ರೋಪಕರಣಗಳು ಪೂರೈಕೆಯಾಗಿವೆ. ಬಂಕರ್ ನಿರ್ಮಾಣ ಕಾಮಗಾರಿ ಶೇ.೮೦ ರಷ್ಟು ಆಗಿದ್ದು, ೨ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ರೇಡಿಯೇಷನ್ ಸೇಪ್ಟಿ ಆಫೀಸರ್, ರೇಡಿಯೇಷನ್ ಆಂಕಾಲಜಿಸ್ಟ್ ನೇಮಕವಾಗಿದೆ. ೨೧೯ ಮಂದಿ ಬೋಧಕ, ಬೋಧಕೇತರ ಸಿಬ್ಬಂದಿಗಳ ಹುದ್ದೆಗಳ ಸೃಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರದ ಸೂಚನೆಯನ್ನು ಈ ಸಂಖ್ಯೆಯನ್ನು ಕಡಿಮೆ ಮಾಡಿ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗಿದೆ.”
– ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕ, ಮಿಮ್ಸ್, ಮಂಡ್ಯ
” ೨೦೧೮ರಲ್ಲಿ ಆರಂಭವಾದ ಟರ್ಷಿಯರಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಇದರಿಂದಜಿಲ್ಲೆಯ ಕ್ಯಾನ್ಸರ್ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕ್ಯಾನ್ಸರ್ ಪೀಡಿತರಿಗೆ ಕನಿಷ್ಠ ಪಕ್ಷ ಕಿಮೋಥೆರಪಿ ಚಿಕಿತ್ಸೆ ಕೂಡ ಸಿಗುತ್ತಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡ ಪಾಳು ಬಿದ್ದಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಕೂಡಲೇ ಕ್ರಮ ವಹಿಸಬೇಕು.”
– ಎಚ್.ಡಿ.ಜಯರಾಂ, ಜಿಲ್ಲಾಧ್ಯಕ್ಷ, ಕರವೇ, ಮಂಡ್ಯ
-ಬಿ.ಟಿ.ಮೋಹನ್ ಕುಮಾರ್





