Mysore
26
overcast clouds

Social Media

ಶನಿವಾರ, 07 ನವೆಂಬರ್ 2026
Light
Dark

ತೆರಿಗೆ ವಸೂಲಾತಿ; ಮೈಸೂರು 6ನೇ ಸ್ಥಾನಕ್ಕೆ ಜಿಗಿತ

ಕೆ.ಬಿ.ರಮೇಶನಾಯಕ

ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶಕ್ಕೆ ತೆರಿಗೆ ವಸೂಲಾತಿಗೆ ಮುಂದಾಗಿರುವ ಪಿಡಿಒಗಳು

ಮೈಸೂರು: ಗ್ರಾಮ ಪಂಚಾಯಿತಿಗಳು ರಾಜ್ಯ, ಕೇಂದ್ರ ಸರ್ಕಾರಗಳ ಅನುದಾನವನ್ನು ನಿರೀಕ್ಷಿಸದೆ ಸ್ವಂತ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಮೂಲಸೌಕರ್ಯಗಳನ್ನು ಕಲ್ಪಿಸಲು ತೆರಿಗೆ ವಸೂಲಾತಿ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವ ಪರಿಣಾಮವಾಗಿ ಮೈಸೂರು ಜಿಲ್ಲೆಯು ತೆರಿಗೆ ವಸೂಲಾತಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಸಾರ್ವಜನಿಕರ ಅಥವಾ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹದ ಬೇಡಿಕೆ ಹಾಗೂ ಬಾಕಿಯಲ್ಲಿ ನಿರೀಕ್ಷಿತ ಸಾಧನೆಗಳನ್ನು ಮಾಡಿರುವ ಜಿಲ್ಲೆಗಳಲ್ಲಿ ಹಾಸನ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರ ದ್ವಿತೀಯ, ಬೆಂಗಳೂರು ದಕ್ಷಿಣ ಮೂರನೇ, ಚಿಕ್ಕಬಳ್ಳಾಪುರ ನಾಲ್ಕನೇ ಹಾಗೂ ಶಿವಮೊಗ್ಗ ಜಿಲ್ಲೆಯು ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ತೆರಿಗೆ ವಸೂಲಾತಿಯಲ್ಲಿ ಪಂಚಾ ಯಿತಿ ಅಭಿವೃದ್ದಿ ಅಧಿಕಾರಿಗಳು ಪ್ರಗತಿ ಸಾಧಿಸಿರುವುದು ಮೈಸೂರು ಜಿಲ್ಲೆಯು ಆರನೇ ಸ್ಥಾನಕ್ಕೆ ಬರಲು ಕಾರಣವಾಗಿದೆ. ೨೦೨೬-೨೭ನೇ ಹಣಕಾಸು ವರ್ಷದ ಅಂತ್ಯಕ್ಕೆ ಮೊದಲನೇ ಸ್ಥಾನಕ್ಕೆ ಬರುವುದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕೆಲವು ಟಾಸ್ಕ್‌ಗಳನ್ನು ಕೊಟ್ಟು ಗುರಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪಂಚಾಯತ್ ರಾಜ್ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ಪರಮಾಧಿಕಾರ ನೀಡಿದ್ದ ಸರ್ಕಾರಗಳು ವರ್ಷಗಳು ಉರುಳುತ್ತಿದ್ದಂತೆ ಹಲ್ಲು ಕಿತ್ತ ಹಾವಿನಂತೆ ಮಾಡಿದೆ. ಮೂರು ಹಂತಗಳಲ್ಲಿ ಈಗ ಗ್ರಾಮ ಪಂಚಾಯಿತಿಗಳಿಗೆ ಒಂದಿಷ್ಟು ಅಧಿಕಾರವನ್ನು ನೀಡಿದೆ. ಕೇಂದ್ರ,ರಾಜ್ಯಸರ್ಕಾರಗಳ ಯೋಜನೆ ಅನುಷ್ಠಾನಗೊಳಿಸುತ್ತಿರುವ ಗ್ರಾಪಂಗಳಿಗೆ ವಾರ್ಷಿಕವಾಗಿ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಿದೆ.

ಹೀಗಾಗಿ, ೧೫ನೇ ಹಣಕಾಸು ಆಯೋಗದ ಅನುದಾನಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ ಕೆಲಸ ಮಾಡುವಂತಾಗಿದೆ. ಇದರ ನಡುವೆ ರಾಜ್ಯಸರ್ಕಾರವು ಸ್ಥಳೀಯ ಆಸ್ತಿಗಳು, ನೀರಿನ ಕರ ಸೇರಿದಂತೆ ಇನ್ನಿತರ ಮೂಲಗಳಿಂದ ಸಂಪನ್ಮೂಲ ಸಂಗ್ರಹಣೆ ಮಾಡಿ ಅದರಿಂದಲೇ ಮೂಲಸೌಕರ್ಯಕ್ಕೆ ಅನುದಾನ ಬಳಸುವಂತೆ ಸೂಚನೆ ನೀಡಿದ ಪರಿಣಾಮವಾಗಿ ಅಧಿಕಾರಿಗಳು ಮೈಮರೆಯದೆ ಕೆಲಸ ಮಾಡಬೇಕಾಗಿದೆ. ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರಿಂದ ತೆರಿಗೆ ವಸೂಲಾಗದಿದ್ದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪಿಡಿಒಗಳು ಬಿಲ್ ಕಲೆಕ್ಟರ್, ಕಾರ್ಯದರ್ಶಿಗಳನ್ನು ಕಾಯದೆ ತಾವೇ ಬಿಲ್ ಬುಕ್ ಹಿಡಿದು ತೆರಿಗೆ ವಸೂಲಾತಿ ಮಾಡುತ್ತಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಎಷ್ಟು ಆಸ್ತಿಗಳು: ಮೈಸೂರು ಜಿಲ್ಲೆಯ ೯ತಾಲ್ಲೂಕುಗಳಿಂದ ೨೫೫ ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ೮,೦೯,೯೮೨ವಿವಿಧ ರೀತಿಯ ಆಸ್ತಿಗಳಿವೆ. ಕೃಷಿ ಆಧಾರಿತಾ ಉತ್ಪಾದನಾ ಘಟಕಗಳು-೪೫೯, ವಾಣಿಜ್ಯ ಆಸ್ತಿಗಳು-೩೩೧೪, ಸಮುದಾಯದ ಆಸ್ತಿಗಳು- ೯೦೮, ಸರ್ಕಾರಿ ಆಸ್ತಿಗಳು- ೪೨೨೮, ಕೈಗಾರಿಕಾ ಆಸ್ತಿಗಳು- ೯೪೬, ವಸತಿ ರಹಿತ ಆಸ್ತಿಗಳು- ೯,೦೮೫, ಧಾರ್ಮಿಕ ಆಸ್ತಿಗಳು- ೧೧೨೨, ವಸತಿ ಆಸ್ತಿಗಳು- ೭,೩೦,೦೫೪, ವಾಣಿಜ್ಯ ಮತ್ತು ವಸತಿ ಪ್ರಾಪರ್ಟೀಸ್-೧೭೮೭ ಆಸ್ತಿಗಳಿವೆ. ಇದರಲ್ಲಿ ಈ ವರ್ಷ ಅಕ್ಟೋಬರ್ ೩೧ರವರೆಗೆ ೪೦.೧ ಕೋಟಿ ರೂಪಾಯಿ ಸಂಗ್ರಹವಾಗಬೇಕಿತ್ತಾದರೂ ಈತನಕ ೩೯.೪೩ ಕೋಟಿ ರೂ.ಸಂಗ್ರಹವಾಗಿ ಶೇ.೯೪.೧ರಷ್ಟು ವಸೂಲಾತಿಯಾಗಿದೆ.

” ತೆರಿಗೆ ವಸೂಲಾತಿಯಲ್ಲಿ ಮೈಸೂರು ಜಿಲ್ಲೆಯ ತಾಲ್ಲೂಕುಗಳ ಪೈಕಿ ಪಿರಿಯಾಪಟ್ಟಣ (ಪ್ರ), ನಂಜನಗೂಡು (ದ್ವಿ) ಹಾಗೂ ತಿ.ನರಸೀಪುರ ತಾಲ್ಲೂಕು ತೃತೀಯ ಸ್ಥಾನ ಪಡೆದಿದೆ”

” ಜಿಲ್ಲೆಯಲ್ಲಿ ತೆರಿಗೆ ವಸೂಲಾತಿಗೆ ಮುಂದಿನ ದಿನಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುವುದು.ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಗುರಿ ನೀಡಲಾಗಿದೆ. ವರ್ಷಾಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಸೂಲಾತಿ ಜತೆಗೆ, ಕೈಬಿಟ್ಟಿರುವ ಆಸ್ತಿಗಳಿಗೂ ತೆರಿಗೆ ವಿಧಿಸುವಂತೆ ಮಾಡಲಾಗುವುದು.”

ಭೀಮಪ್ಪ ಕೆ.ಲಾಳಿ, ಉಪ ಕಾರ್ಯದರ್ಶಿ,ಜಿಪಂ

 

 

Tags:
error: Content is protected !!