Mysore
25
overcast clouds

Social Media

ಶನಿವಾರ, 07 ನವೆಂಬರ್ 2026
Light
Dark

ಕೃಷ್ಣಯ್ಯನಹುಂಡಿಯಲ್ಲಿ ನೀರಿನ ಸಮಸ್ಯೆಗೆ ಮುಕ್ತಿ

ಮಂಜು ಕೋಟೆ

ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಿದ ಶಂಕರೇಗೌಡ 

ಎಚ್.ಡಿ.ಕೋಟೆ: ಅಧಿಕಾರಿಗಳು ಕುಡಿಯುವ ನೀರು ಒದಗಿಸಲು ಎಷ್ಟೇ ಪ್ರಯತ್ನಪಟ್ಟರೂ ಗ್ರಾಮದಲ್ಲಿ ನೀರಿಲ್ಲದೆ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ನೀರನ್ನು ಒದಗಿಸುವಲ್ಲಿ ಸಮಾಜ ಸೇವಕ ಹಾಗೂ ರೈತ ಮುಖಂಡ ನಲ್ಲೂರು ಶಂಕರೇಗೌಡ ಮತ್ತು ಸ್ನೇಹ ಬಳಗದವರು ಯಶಸ್ವಿಯಾಗಿದ್ದಾರೆ.

ಹಂಪಾಪುರ ಹೋಬಳಿ ವ್ಯಾಪ್ತಿಯ ಆಲನಹಳ್ಳಿ ಗ್ರಾಮದ ಸಮೀಪದ ಕೃಷ್ಣಯ್ಯನ ಹುಂಡಿ ಗ್ರಾಮದಲ್ಲಿ ೪ ತಿಂಗಳುಗಳಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿ ಗ್ರಾಮದ ೧೦೦ ಕುಟುಂಬಗಳು ಪರದಾಡುತ್ತಿದ್ದವು. ಆಲನಹಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರಿ ವರ್ಗದವರು ಎರಡು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಸಿಕ್ಕಲಿಲ್ಲ ಮತ್ತು ಗ್ರಾಮಸ್ಥರೇ ಊರಿನಲ್ಲಿ ಚಂದಾ ಎತ್ತಿ ಮತ್ತೆರಡು ಬೋರ್‌ವೆಲ್ ಹಾಕಿಸಿದರೂ ನೀರು ಬರಲಿಲ್ಲ. ಹೀಗಾಗಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಪಂಚಾಯಿತಿಯವರು ನಿತ್ಯವೂ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದರು. ಶಂಕರೇಗೌಡ ಮತ್ತು ಸ್ನೇಹ ಬಳಗದವರು ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಬೋರ್‌ವೆಲ್ ಕೊರೆಸಿದಾಗ ಉತ್ತಮವಾದ ನೀರು ಬಂದಿದೆ. ಇದನ್ನು ನೋಡಿದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಕುಣಿದು ಕುಪ್ಪಳಿಸಿದರು. ಶಂಕರೇಗೌಡರವರಿಗೆ ಗ್ರಾಮಸ್ಥರೇ ಆರತಿ ಎತ್ತಿ ಜೈಕಾರ ಕೂಗಿ ಅಭಿನಂದಿಸಿದರು.

ನಂತರ ಸಮಾಜ ಸೇವಕ ಮತ್ತು ರೈತ ಮುಖಂಡ ಶಂಕರೇಗೌಡ ಮಾತನಾಡಿ, ಕಳೆದ ವರ್ಷದಿಂದ ತಾಲ್ಲೂಕಿನಲ್ಲಿ ನೊಂದವರಿಗೆ, ಬಡವರಿಗೆ ಸಮಾಜ ಸೇವೆಯ ಮೂಲಕ ನೆರವು ನೀಡುತ್ತಿದ್ದೇವೆ. ಹಂಪಾಪುರ ವ್ಯಾಪ್ತಿಯ ಬಾಚೇಗೌಡನಹಳ್ಳಿ, ಕ್ಯಾತನಹಳ್ಳಿ, ಕೃಷ್ಣಯ್ಯನ ಹುಂಡಿ, ಇನ್ನಿತರ ಗ್ರಾಮಗಳಲ್ಲಿ ದೇವಸ್ಥಾನದ ಅಭಿವೃದ್ಧಿ, ಕುಡಿಯುವ ನೀರು, ರೋಗಿಗಳಿಗೆ ಧನಸಹಾಯವನ್ನು ಸ್ನೇಹ ಬಳಗದ ಮೂಲಕ ಮಾಡಲಾಗುತ್ತಿದೆ ಎಂದರು.

ಮೂಲಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್‌ಗೆ ಪ್ರಾಮುಖ್ಯತೆ ನೀಡ ಬೇಕು. ಇವುಗಳಿಂದ ವಂಚಿತವಾದ ಗ್ರಾಮಗಳಲ್ಲಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಕೃಷ್ಣಯ್ಯನಹುಂಡಿ ಹೊರತಾಗಿರಲಿಲ್ಲ. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸಂತೋಷ ನಮ್ಮದಾಗಿದೆ ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹರೀಶ್, ಜಾ.ದಳ ಯುವ ಮುಖಂಡ ಸಾಗರೆ ಮಹೇಂದ್ರ, ಕೃಷ್ಣೆಗೌಡ, ಅರವಿಂದ, ರಾಜೇಂದ್ರ, ಶಿವರಾಜ್, ವಕೀಲ ರವಿಕುಮಾರ್, ನಿಂಗೇಗೌಡ, ಇಂದ್ರಣ್ಣ, ಕುಮಾರಸ್ವಾಮಿ, ರಾಮಣ್ಣ, ಮಹದೇವ್, ಭೈರೇಗೌಡ, ಶಿವಣ್ಣ, ಗ್ರಾಮದ ಮುಖಂಡರು, ಯುವಕರು ಈ ಸಂದರ್ಭದಲ್ಲಿ ಹಾಜರಿದ್ದರು.

” ನಾವು ಸಂಪಾದಿಸುವ ಹಣದಿಂದ ಸೇವಾ ಮನೋಭಾವನೆಯಿಂದ ಸೇವಾ ಕಾರ್ಯ ಮಾಡಿದಾಗ ಅತ್ಯುತ್ತಮವಾದ ಕೆಲಸಗಳು ನಡೆಯುತ್ತವೆ. ನಮ್ಮ ಸಮಾಜಸೇವೆಯನ್ನು ಯಶಸ್ವಿಯಾಗಿ ಮಾಡಿಕೊಂಡು ಹೋಗುತ್ತೇವೆ. ಈ ಭಾಗದ ಜನರು ತೋರಿಸುತ್ತಿರುವ ಪ್ರೀತಿ ವಿಶ್ವಾಸಕ್ಕೆ ಸದಾ ನಾವು ಚಿರಋಣಿಯಾಗಿದ್ದೇವೆ.”

-ನಲ್ಲೂರು ಶಂಕರೇಗೌಡ

 

 

Tags:
error: Content is protected !!