Mysore
24
few clouds
Light
Dark

ಸಿದ್ದು ನಾಯಕತ್ವಕ್ಕಿರುವ ಶಕ್ತಿ; ಕಾಂಗ್ರೆಸ್‌ಗಿರುವ ಅನಿವಾರ್ಯತೆ

ಬೆಂಗಳೂರು ಡೈರಿ
ಆರ್.ಟಿ.ವಿಠಲಮೂರ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠ ನಾಯಕರಾಗಿ ಹೊರಹೊಮ್ಮಲಿದ್ದಾರೆಯೇ? ಹಾಗೆಂಬು ದೊಂದು ಪ್ರಶ್ನೆ ರಾಜ್ಯ ರಾಜಕೀಯದ ಒಳವಲಯಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಪ್ಲೋಟ್ ಅವರು ಸಿದ್ದರಾಮಯ್ಯ ಅವರ ವಿಚಾರಣೆಗೆ ಅನುಮತಿ ನೀಡಿದರಲ್ಲ ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದರ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದ್ದು, ಇದಾದ ನಂತರ ಮುಂದೇನಾಗಲಿದೆ ಎಂಬ ಬಗ್ಗೆ ಕುತೂಹಲಕಾರಿ ಚರ್ಚೆಗಳು ಆರಂಭವಾಗಿವೆ.

ಅಂದ ಹಾಗೆ ಒಂದು ರಾಜಕೀಯ ಬಿಕ್ಕಟ್ಟು ತಲೆದೋರಿದ ಸಂದರ್ಭದಲ್ಲಿ ಪರ್ಯಾಯ ನಾಯಕತ್ವಕ್ಕೆ ಹಲವು ಆಕಾಂಕ್ಷಿಗಳು ಸಿದ್ದರಾಗುತ್ತಾರೆ. ಮತ್ತದು ಸಹಜ ಕೂಡ ಎಲ್ಲರಿಗೂ ಗೊತ್ತಿರುವಂತೆ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭವಿಷ್ಯದ ಮುಖ್ಯ ಮಂತ್ರಿಯಾಗಲು ಕಾಯುತ್ತಿರುವವರು. ಈಗ ಸಿದ್ದರಾಮಯ್ಯ ಪ್ರಕರಣ ಭುಗಿಲೆದ್ದ ಕೂಡಲೇ ಅವರು ಪರ್ಯಾಯ ನಾಯಕತ್ವಕ್ಕೆ ಬರಲು ಹವಣಿಸುತ್ತಿದ್ದಾರೆ ಅಂತಲ್ಲ. ಆದರೆ ರಾಜಕೀಯ ಬಿಕ್ಕಟ್ಟು ಶುರುವಾದಾಗ, ಪರ್ಯಾಯ ನಾಯಕನ ಆಯ್ಕೆ ಅನಿವಾರ್ಯ ಎನ್ನುವ ಸೂಚನೆ ಕಂಡಾಗ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಹಲವರು ಕಾಣಿಸಿಕೊಳ್ಳುತ್ತಾರೆ. ಕುತೂಹಲದ ಸಂಗತಿ ಎಂದರೆ ರಾಜ್ಯಪಾಲ ಥಾವರ್ ಚಂದ್ ಗೆ ಹೋಟ್ ಅವರು ಮುಖ್ಯಮಂತ್ರಿಗಳ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿದ ನಂತರ ಪರ್ಯಾಯ ನಾಯಕತ್ವಕ್ಕೆ ಯಾರು ಬರಬಹುದು ಎಂಬ ಚರ್ಚೆ ರಾಜಕೀಯ ವಲಯಗಳಲ್ಲಿ ಆರಂಭವಾಯಿತು. ಈ ವಿಷಯ ಬಂದಾಗ ಸಹಜವಾಗಿ ಎಲ್ಲರಿಗೂ ಕಾಣಿಸಿದ ಮೊದಲ ಹೆಸರು ಡಿ.ಕೆ.ಶಿವಕುಮಾರ್. ಕಳೆದ ವರ್ಷ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾದಾಗ ಅದನ್ನು ಇತ್ಯರ್ಥಪಡಿಸಲು ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಒಂದು ವಾರ ಪರದಾಡಿದ್ದರು. ಅಂತಿಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆಶಿ ಉಪ ಮುಖ್ಯಮಂತ್ರಿ ಎಂದೂ ತೀರ್ಮಾನ ವಾದಾಗ ಹಿಂದಿನಿಂದ ಮತ್ತೊಂದು ಗುಸುಗುಸು ಶುರುವಾಯಿತು. ಅದೆಂದರೆ ಮುಖ್ಯಮಂತ್ರಿ ಹುದ್ದೆಯನ್ನು ಹೈಕಮಾಂಡ್ ಎರಡು ಅವಧಿಗೆ ಹಂಚಿಕೆ ಮಾಡಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಈ ಗುಸುಗುಸು.

ಮುಂದೆ ಈ ವಿಷಯ ಹಿಡಿದು ಸಿದ್ದರಾಮಯ್ಯ ಬೆಂಬಲಿಗರು ಮತ್ತು ಡಿಕೆಶಿ ಬೆಂಬಲಿಗರು ಕಿಚಪಿಚ ಮಾಡಿಕೊಂಡಿದ್ದು ರಹಸ್ಯವೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಬಂಧದ ಮಾತುಕತೆಗಳು ಕೇಳಿ ಬರುತ್ತಿಲ್ಲವಾದರೂ ಆಳದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಗಿರಿ ಯನ್ನು ಹಂಚಲಾಗಿದೆ ಎಂಬ ಗುಸುಗುಸು ಇದ್ದೇ ಇದೆ.

ಆದರೆ ಯಾವಾಗ ರಾಜ್ಯಪಾಲರ ಎಪಿಸೋಡು ಪ್ರಾರಂಭವಾಯಿತೋ ಇದಾದ ನಂತರ ಪರ್ಯಾಯ ನಾಯಕತ್ವಕ್ಕೆ ಯಾರು ಬರಬಹುದು ಎಂಬ ಮಾತುಗಳು ಕೇಳಿಸತೊಡಗಿದವು. ಈ ಮಾತುಕತೆಗಳಲ್ಲಿ ಡಿಕೆಶಿ ಹೆಸರು ಹೇಗೆ ಕೇಳಿಸಿತೋ ಅದೇ ರೀತಿ ಬೇರೆ ಬೇರೆ ನಾಯಕರ ಹೆಸರುಗಳೂ ಕೇಳಿಸತೊಡಗಿದವು. ಈ ಪೈಕಿ ಮುಖ್ಯವಾದುದು ಎಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರದು. ಕೆಲ ತಿಂಗಳ ಹಿಂದೆ ಲೋಕಸಭಾ ಚುನಾವಣೆಯ ತಯಾರಿಗೆ ಅಂತ ರಾಜ್ಯದ ನಾಯಕರು ದಿಲ್ಲಿಗೆ ಹೋಗಿದ್ದರಲ್ಲಿ ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಮಾತನಾಡುತ್ತಾ, ಸದ್ಯಕ್ಕೇನೋ ನನಗೆ ದಿಲ್ಲಿಯಲ್ಲಿ ಕೆಲಸವಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದೆ ಹೋದರೆ ನಾನು ದಿಲ್ಲಿಯಲ್ಲಿದ್ದೇನು ಮಾಡಲಿ. ಹೀಗಾಗಿ ಕರ್ನಾಟಕಕ್ಕೆ ಮರಳಿ ಬರುತ್ತೇನೆ. ಬಂದ ಮೇಲೆ ನನ್ನ ಪಾಲು ಕೇಳುತ್ತೇನೆ ಎಂದಿದ್ದರು.

ನನ್ನ ಪಾಲು ಎಂಬುದರ ಅರ್ಥವೇನು? ಮುಖ್ಯಮಂತ್ರಿ ಹುದ್ದೆಯನ್ನು ಹೊರತುಪಡಿಸಿ ಬೇರೆ ಯಾವುದರಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಲು ಕೇಳಲು ಸಾಧ್ಯ? ಹೀಗಾಗಿ ಮೊನ್ನಿನ ಎಪಿಸೋಡು ಪ್ರಾರಂಭವಾದ ನಂತರ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಬರಬಹುದು ಎಂಬ ಮಾತುಗಳು ಶುರುವಾದವು. ಈ ಮಧ್ಯೆ ಹಾಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರೂ ಈ ಸಾಲಿನಲ್ಲಿ ಕಾಣಿಸಿಕೊಂಡಿತು. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಅವಧಿಗೆ ಹಂಚಿಕೆ ಮಾಡಲಾಗಿದೆ ಎಂಬುದನ್ನು ಪರಮೇಶ್ವರ್ ಒಪ್ಪುತ್ತಿಲ್ಲ. ಹಾಗಂತ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.

ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಒಂದು ಬಾರಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ಮುಖ್ಯಮಂತ್ರಿ ಹುದ್ದೆಗೇರಲು ನಾನು ತಯಾರಿದ್ದೇನೆ. ಅಗತ್ಯವಾದರೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಚುನಾವಣೆ ನಡೆಯಲಿ ಎಂದು ಪರಮೇಶ್ವರ್ ಹೇಳಿದ್ದರಂತೆ. ಹೀಗಾಗಿ ಈ ಸಲ ಡಿಕೆಶಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನ ಜತೆ ಪರಮೇಶ್ವರ್ ಅವರ ಹೆಸರೂ ಕಾಣಿಸಿಕೊಂಡಿದ್ದು ನಿಜ ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಂಡಿರುವ ಪ್ರಬಲ ತಂಡವೊಂದರ ನಾಯಕರಾಗಿರುವವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ನಾನೇ ಸಿಎಂ ಹುದ್ದೆಗೆ ಬರಬೇಕು ಅಂದಿದ್ದಾರೆ ಎಂದೂ ಇದಕ್ಕಾಗಿ ಅಗತ್ಯ ಬಿದ್ದರೆ ಪಕ್ಷ ತೊರೆದು ಬಿಜೆಪಿ -ಜಾ.ದಳ ಮೈತ್ರಿ ಕೂಟದ ಜತೆ ಕೈ ಜೋಡಿಸಲೂ ಅವರು ಸಿದ್ಧರಾಗಿದ್ದಾರೆ ಎಂಬ ಮಾತುಗಳೂ ಹಲವು ಕಾಲದ ಹಿಂದೆ ಕೇಳಿ ಬಂದಿದ್ದವು. ಹೀಗಾಗಿ ಈ ಸಲ ಸಹಜವಾಗಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಇನ್ನು ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ಕಾಂಗ್ರೆಸ್ ಮೂಲಗಳ ಪ್ರಕಾರ, ರಾಜ್ಯಪಾಲರ ಎಪಿಸೋಡು ಪ್ರಾರಂಭವಾದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಆರ್.ವಿ.ದೇಶಪಾಂಡೆ ಅವರು, ಬದಲಾವಣೆ ಅನಿವಾರ್ಯವಾದರೆ ನೀವು ಕರ್ನಾಟಕಕ್ಕೆ ಬನ್ನಿ. ಇಲ್ಲವೇ ನನಗೊಂದು ಅವಕಾಶ ಕೊಡಿ ಎಂದಿದ್ದಾರಂತೆ.

ಇದೇ ರೀತಿ ನಾಯಕತ್ವ ಬದಲಾವಣೆ ಅನಿವಾರ್ಯವೇ ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿ ಹುದ್ದೆಗೇರಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಈಗಾಗಲೇ ಕೇಳುತ್ತಿರುವುದು ನಿಜ. ಇದಕ್ಕೆ ಮುಖ್ಯ ಕಾರಣ, ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವರಿಷ್ಠರಿಗೆ ಅತ್ಯಾಪ್ತರು, ನಾಳೆ ಬದಲಾವಣೆ ಅನಿವಾರ್ಯವೇ ಆದರೆ ಸಿದ್ದರಾಮಯ್ಯ ಅವರು ಜಾರ್ಜ್ ಹೆಸರನ್ನು ಸೂಚಿಸಬಹುದು ಎಂಬುದು ಈ ಮಾತುಗಳ ಮುಂದಿನ ಭಾಗ.

ಹೀಗೆ ಭವಿಷ್ಯದ ನಾಯಕತ್ವಕ್ಕೆ ಯಾರು ಬರಬಹುದು ಎಂಬ ಮಾತುಗಳು ಚಾಲನೆಯಲ್ಲಿರುವಾಗಲೇ ಸ್ಪಷ್ಟವಾಗುತ್ತಿರುವ ಸಂಗತಿ ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠ ನಾಯಕರಾಗಿ ಹೊರಹೊಮ್ಮಬಹುದು ಎಂಬುದು. ಇದಕ್ಕೆ ರಾಜ್ಯದ ರಾಜಕೀಯ ಪರಿಸ್ಥಿತಿ ಕಾರಣ. ಮೊದಲನೆಯದಾಗಿ ರಾಜ್ಯದ ಬಲಿಷ್ಠ ವರ್ಗಗಳು ಬಿಜೆಪಿ-ಜಾ.ದಳ ಮೈತ್ರಿಕೂಟದ ಬೆನ್ನಿಗೆ ನಿಲ್ಲುತ್ತಿವೆ. ಲೋಕಸಭಾ ಚುನಾವಣೆಯ ಫಲಿತಾಂಶ ಇದನ್ನು ಸ್ಪಷ್ಟಪಡಿಸಿದೆ. ಎರಡನೆಯದಾಗಿ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಂತಹ ಜನನಾಯಕರು ಮತ್ತೊಬ್ಬರಿಲ್ಲ. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಕೆಳಗಿಳಿಯುವುದು ಎಂದರೆ ಕಾಂಗ್ರೆಸ್ ಪಕ್ಷ ಮಧ್ಯಂತರ ಚುನಾವಣೆಗೆ ಅಣಿಯಾಗಬೇಕು ಅಂತಲೇ ಅರ್ಥ. ಏಕೆಂದರೆ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಯಾರನ್ನೇ ತಂದರೂ ಅವರು ಸಿದ್ದರಾಮಯ್ಯ ಅವರಂತೆ ರಾಜ್ಯ ಕಾಂಗ್ರೆಸ್ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಿಲ್ಲ. ಇದೇ ರೀತಿ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂದರೆ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಒಪ್ಪುವುದಿಲ್ಲ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರೋ, ಪರಮೇಶ್ವರ್ ಅವರೋ ಸಿಎಂ ಹುದ್ದೆಗೆ ಬರುತ್ತಾರೆ ಎಂದರೆ ಡಿಕೆಶಿ ಒಪ್ಪುವುದಿಲ್ಲ. ಹೀಗೆ ನಾಯಕತ್ವದ ವಿಷಯದಲ್ಲಿ ಪೈಪೋಟಿ ಆರಂಭವಾಗಿದ್ದೇ ಆದರೆ ಅದು ದೊಡ್ಡ ಮಟ್ಟದ ಅಂತಃಕಲಹಕ್ಕೆ ದಾರಿ ಮಾಡಿಕೊಡುವುದಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಂತಾಗುತ್ತದೆ. ಒಂದು ಸಲ ಈ ಬೆಳವಣಿಗೆ ನಡೆದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುವುದು ಅಸಾಧ್ಯ.

ದಿಲ್ಲಿಯ ಕಾಂಗ್ರೆಸ್ ನಾಯಕರಿಗಿರುವ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರು ಕೆಳಗಿಳಿದು ಮಧ್ಯಂತರ ಚುನಾವಣೆ ನಡೆದಿದ್ದೇ ಆದರೆ ರಾಜ್ಯ ಕಾಂಗ್ರೆಸ್ ಅರವತ್ತು ಸೀಟುಗಳ ಗಡಿ ದಾಟಲು ಕೂಡ ಸಾಧ್ಯವಿಲ್ಲ. ಹಾಗೇನಾದರೂ ಆದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಶಕ್ತಿಯೇ ಕುಸಿದು ಹೋಗುತ್ತದೆ. ಹಾಗಾಗಬಾರದು ಎಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಸುಭದ್ರವಾಗಿರಬೇಕು. ಹಾಗಂತಲೇ ರಾಜ್ಯಪಾಲರ ಎಪಿಸೋಡು ಪ್ರಾರಂಭವಾದ ನಂತರ ತಾನೇ ಸಿದ್ದರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಂತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಅದೇ ಕಾಲಕ್ಕೆ ರಾಜ್ಯ ಸಚಿವ ಸಂಪುಟ ಮತ್ತು ಶಾಸಕಾಂಗ ಪಕ್ಷದ ಬೆಂಬಲ ಸಿದ್ದರಾಮಯ್ಯ ಅವರ ಜತೆಗಿರುವಂತೆ ನೋಡಿಕೊಂಡಿದೆ.

ಅರ್ಥಾತ್, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯಾವುದೇ ಯತ್ನಕ್ಕೆ ಪ್ರಬಲ ತಿರುಗೇಟು ಕೊಡುವುದು ಅದರ ಉದ್ದೇಶ. ಅದರ ಪ್ರಕಾರ, ಪ್ರಕರಣ ನ್ಯಾಯಾಂಗದ ಮೆಟ್ಟಿಲು ಹತ್ತಿದ್ದರೂ ಅಲ್ಲಿ ಸಿದ್ದರಾಮಯ್ಯ ಅವರಿಗೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ ಇಂತಹ ಸಾಧ್ಯಾಸಾಧ್ಯತೆಗಳೇನೇ ಇದ್ದರೂ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ವರಿಷ್ಠರು ಏಕೋಭಾವದಿಂದಿರುವುದು ನಿಜ. ಇದೇ ಅಂಶ ಸಿದ್ದರಾಮಯ್ಯ ಅವರ ನಾಯಕತ್ವಕ್ಕಿರುವ ಶಕ್ತಿಯನ್ನು ಮತ್ತು ರಾಜ್ಯ ಕಾಂಗ್ರೆಸ್ಸಿಗಿರುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತಿದೆ.

ಹೀಗಾಗಿ ಈ ಸಂಘರ್ಷದ ನಡುವೆ ಅವರು ಬಲಿಷ್ಠರಾಗಿ ಹೊರಹೊಮ್ಮುವುದಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಯ ಆಕಾಂಕ್ಷಿಗಳು ಮೇಲೆದ್ದು ನಿಲ್ಲದಂತೆ ಮಾಡಲಿದ್ದಾರೆ ಎಂಬುದು ಸದ್ಯದ ಲೆಕ್ಕಾಚಾರ. ಮುಂದೇನಾಗುತ್ತದೆಯೋ ಕಾದು ನೋಡಬೇಕು.

ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಂಡಿರುವ ಪ್ರಬಲ ತಂಡವೊಂದರ ನಾಯಕರಾಗಿರುವವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ನಾನೇ ಸಿಎಂ ಹುದ್ದೆಗೆ ಬರಬೇಕು ಎಂದಿದ್ದಾರೆ ಎಂದೂ ಇದಕ್ಕಾಗಿ ಅಗತ್ಯ ಬಿದ್ದರೆ ಪಕ್ಷ ತೊರೆದು ಬಿಜೆಪಿ-ಜಾ.ದಳದ ಮೈತ್ರಿ ಕೂಟದ ಜತೆ ಕೈ ಜೋಡಿಸಲೂ ಅವರು ಸಿದ್ಧರಾಗಿದ್ದಾರೆ ಎಂಬ ಮಾತುಗಳೂ ಹಲವು ಕಾಲದ ಹಿಂದೆ ಕೇಳಿ ಬಂದಿದ್ದವು. ಹೀಗಾಗಿ ಈ ಸಲ ಸಹಜವಾಗಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಇನ್ನು ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಕೂಡ ಮುಖ್ಯ ಮಂತ್ರಿ ಹುದ್ದೆಯ ಆಕಾಂಕ್ಷಿ. ಕಾಂಗ್ರೆಸ್ ಮೂಲಗಳ ಪ್ರಕಾರ, ರಾಜ್ಯಪಾಲರ ಎಪಿಸೋಡು ಪ್ರಾರಂಭವಾದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಆರ್.ವಿ.ದೇಶಪಾಂಡೆ ಅವರು, ಬದಲಾವಣೆ ಅನಿವಾರ್ಯವಾದರೆ ನೀವು ಕರ್ನಾಟಕಕ್ಕೆ ಬನ್ನಿ. ಇಲ್ಲವೇ ನನಗೊಂದು ಅವಕಾಶ ಕೊಡಿ ಎಂದಿದ್ದಾರಂತೆ.