ಮೊಗಳ್ಳಿ ಗಣೇಶ್
೧) ಯಾಕೆ ಇಷ್ಟೊಂದು ಹೆದ್ದಾರಿ ವಾಯು ಮಾರ್ಗ ಸಮುದ್ರ ಮಾರ್ಗ… ಜಗತ್ತನ್ನು ಯಾಕೆ ಸುತ್ತುವರು ಜನ ಬಿಡುವಿಲ್ಲದಂತೆ… ಅದಕ್ಕಾಗಿ ಎಷ್ಟೊಂದು ಮಾನವ ಸಂಪತ್ತು ಹರಿದಾಡಿ ಎಲ್ಲಿ ಹೋಗುವುದೊ…
ಒಂದು ನಕ್ಷತ್ರ ನೋಡಿ ಉಪ್ಪರಿಗೆಯ ಕತ್ತಲಲ್ಲಿ ಮಲಗಿದ್ದಾಗಲೇ ಆಕಾಶ ಸುಂದರವಾಗಿ ಕಾಣುತಿತ್ತಲ್ಲ… ಬೆಟ್ಟವೇರಿ ನಗರ ನೋಡಿದರೆ ಈಗ ಹತ್ತಿ ಉರಿವಂತೆ ಗೋಚರಿಸುತ್ತದಲ್ಲಾ…
ಹೋಲಿಕೆಯ ಸರಿ ತಪ್ಪಿನ ಲೆಕ್ಕವಲ್ಲ. ಪಯಣಿಸಲೆಂದು ಭೂಗೋಳದ ಸುತ್ತ ರಸ್ತೆಗಳಿವೆ ಸರಿ… ಆ ಹೆದ್ದಾರಿಗಳಲ್ಲಿ ಏನು ನಡೆಯುತ್ತಿದೆ… ದಾರಿಗಳೇ ಗೊತ್ತಿಲ್ಲದವರು ಹೆದ್ದಾರಿಗಳನೆಲ್ಲ ನಿರ್ಮಿಸುತ್ತಿದ್ದಾರಲ್ಲಾ; ಈ ಮಾರ್ಗಗಳೆಲ್ಲ ಎಲ್ಲಿ ಸಂಧಿಸುತ್ತಿವೆ… ಈ ರೈಲು ದಾರಿಗಳೆಲ್ಲ ಏನೇನು ಸಾಗಿಸುತ್ತಿವೆ… ನಮಗೆ ತಿಳಿಯದ ಮಾರ್ಗಗಳ ಜಾಲ ಯಾವ ತರದ್ದು? ಒಂದು ಊರಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಇಷ್ಟೆಲ್ಲ ಭದ್ರತೆ ವ್ಯವಸ್ಥೆ ತಪಾಸಣೆ… ಮುನ್ನೆಚ್ಚರಿಕೆಗಳು ಬೇಕೆ? ಯಾಕೆ ಹೆದ್ದಾರಿಗಳಿಗೆ ಇಷ್ಟೊಂದು ಕಣ್ಗಾವಲು… ಕಳ್ಳಸಾಗಾಣಿಕೆಯ ರಹದಾರಿಗಳೊ…
ಯಾರಿಗೆ ಸಂಬಂಧಿಸಿದವು ಈ ಬೃಹತ್ ಸಾಲು ಪಥಗಳ ಹೆದ್ದಾರಿಗಳು? ಅವರವರು ಅಲ್ಲಲ್ಲೆ ಬಿದ್ದಿರಲಿ… ಎಲ್ಲೂ ಹೋಗದಿರಲಿ ಎಂದಲ್ಲ… ಈ ರಸ್ತೆಗಳೇ ನಾಳೆ ಇನ್ನೇನೊ ನಿರ್ಬಂಧಗಳು… ಜಗದ ಕೊಂಡಿಗಳೇ ಇರಬಹುದು…
ಯಾರಿಗೆ ಗೊತ್ತಿತ್ತು… ಸಮುದ್ರ ಮಾರ್ಗಗಳು ಹೀಗೆಲ್ಲ ಮಾಡುತ್ತವೆಂದು… ಎಲ್ಲ ಮಾರ್ಗಗಳು ತಿಳಿದ ನಂತರವೇ ಮನುಷ್ಯರ ಬರ್ಬರತೆಯೂ ಗೊತ್ತಾದದ್ದು. ವಾಯು ಮಾರ್ಗಗಳ ನಕಾಶೆಯ ಯುದ್ಧಗಳೊ… ಭಯ ಹುಟ್ಟಿಸುತ್ತವೆ. ಸರಿ ಸರಿ… ಮಾರ್ಗ ವಿರೋಧಿಯಲ್ಲ ನಾನು. ನೋಡೋಣ; ಇನ್ನು ಮುಂದೆ ಈ ಹೆದ್ದಾರಿಗಳಲ್ಲಿ ಏನೇನು ನಡೆಯುತ್ತದೆಎಂದು…
*****
೨) ದೇಶದ ದೊಡ್ಡ ನಗರಗಳ ಗಲ್ಲಿಗಲ್ಲಿ ಸಂದಿ ಮರೆಗಳಲ್ಲಿ ರೆಡ್‌ಲೈಟ್ ಏರಿಯಾಗಳಲ್ಲಿ ಬೆಳಿಗ್ಗೆಯಿಂದಲೇ ದಂಧೆ ಆರಂಭ… ರಾತ್ರಿ ಒಂದಾದರೂ ನಡೆದೀತು…
ಎಲ್ಲ ಹಸಿದ ಕಾಮಿಗಳು ಕುಡಿದ ಟ್ರಕ್ ಡ್ರೈವರ್‌ಗಳು ವ್ಯಸನಿಗಳು ಪೋಲಿ ಪುಂಡರು ನಿತ್ಯ ನರಕದಲ್ಲಿ ದುಡಿದು ಕ್ಷಣಿಕ ಸ್ಪರ್ಶಕ್ಕೆ ದಾಹಗೊಂಡು ಬಂದು ಬಿದ್ದು ಹೊರಳಾಡಿ ಹೊರಟು ಹೋಗುವವರು…
ಎಂತಹ ರತಿಕೇರಿಯೊ ಅಂಗನೆಯರಿಗೇನು ಬೆಲೆಯೊ ಹೊಟ್ಟೆಗಿಷ್ಟು ಅನ್ನವೊ ಗತನಾತದ ಕೊಂಪೆಯ ಮರೆಗೆ ಎಷ್ಟು ಜನ ವಾರಸುದಾರರೊ ಬಾಡಿಗೆ ಎಷ್ಟೋ ಅಣ್ಣತಮ್ಮಂದಿರೆಷ್ಟೋ ಕಾಯುವ ಪುಡಿ ರೌಡಿಗಳ ಕಾರು ಬಾರು ಏನೊ… ಅಲ್ಲೂ ಇದ್ದಾರೆ ನಿವೃತ್ತ ದಂಧೆಯವರು; ಸಹಕರಿಸುತ್ತಾರೆ… ಕಷ್ಟ ಸುಖಕ್ಕೆ ಬರುತ್ತಾರೆ ಬದುಕು ಇಷ್ಟೊಂದು ನಿಕೃಷ್ಟವಾಯಿತು ಯಾಕೆ…
ಜಗತ್ತಿನ ವೇಗ ಆಕಾಶದಲ್ಲಿ ಎಷ್ಟಿದ್ದರೆ ಏನೂ… ಇಲ್ಲಿ ನೋಡಿದರೆ ಅದೇ ನರಕ ಅದೇ ಕೈಹಿಡಿದ ಕೊನೆಯ ಗಿರಾಕಿ ಬರುತ್ತಾರೆ ಮಲಗುತ್ತಾರೆ ಹೋಗುತ್ತಾರೆ… ತರಾವರಿ ಜನ; ಎಲ್ಲರದೂ ಅದೊಂದೇ ದಾರಿ ಅದೇ ಹರುಕು ಸುಖ ಹುಳುಕು ಮಾತು ಹಾಸುಂಡು ಬೀಸಿ ಒಗೆದಂತೆ ಎದ್ದೆದ್ದು ಹೊರಡುವರು… ಮತ್ತೆ ಬಂದರೆ ಬರುವರು. ನಿತ್ಯ ಗಿರಾಕಿಗಳೇ ಒಂತರಾ… ರಿಯಾಯಿತಿಯ ರತಿ ವ್ಯಾಪಾರ…
ಸಂಜೆ ಆಗುತ್ತಿದ್ದಂತೆ ಮಧ್ಯರಾತ್ರಿತನಕ ವ್ಯಾಪಾರ ಭರಾಟೆ ಅಲ್ಲೆ ಮಿನುಗಿ ಅಲ್ಲೆ ಸಾಯುವ ಬಣ್ಣಗಳ ಬೆಳಕಿನ ಜಾತ್ರೆಯಲ್ಲಿ ಯಾವ ದೇವರೂ ಇಲ್ಲ ದೂತರೂ ಇಲ್ಲ… ಯಾರು ಇಲ್ಲ ಗಿರಾಕಿಗಳೇ ಭಗವಂತರು… ಆ ಬಗೆಯ ರೆಡ್‌ಲೈಟ್ ಏರಿಯಾಗಳು ಭೂಮಿಯ ಮೇಲಿನ ವ್ರಣ ಗಾಯಗಳಂತೆ ಕೀತುಕೊಂಡು ಅಲ್ಲೇ ಅಂಟಿಕೊಂಡಿವೆ.
೩) ಆತ ತನಗೆ ತಾನೆ ಲಯ ವಿನೋದದಲ್ಲಿ ತೇಲುತಿದ್ದ. ತಾರಕ ತಾಳದಲ್ಲಿ ನಶ್ವರತೆ ನರ್ತಿಸುತಿತ್ತು. ದಿಕ್ಕುದೆಸೆ ಕಾಣದೆ ಊರೂರು ಅಲೆಯುತಿದ್ದ. ಭೂಮಿ ಗುಂಡಾಗಿಲ್ಲ. ತುಂಡು ತುಂಡಾಗಿ ಹರಿದು ಹೋಗಿದೆ ಎಂದು ಸಂಕಟ ಪಡುತಿದ್ದ. ಆಗಾಗ ಯಾರೊ ಬಂದು ಎದೆಯ ಕದವ ತಟ್ಟಿ ಮಾಯವಾಗುವರಲ್ಲಾ… ಸರಸದಲ್ಲಿ ಆಕಾಶ ಮೈಯ ಸವರಿದಂತಾಗುತ್ತದೆ.
ಎದೆಗೂಡಲ್ಲಿ ಆಗಾಗ ನಕ್ಕಂತೆ ಮಿಂಚಾಗುವ ಆ ಚೆಲುವೆ ಯಾರು… ಆತ್ಮವನ್ನು ಯಾರೊ ಬಿಗಿದು ಸುಪ್ತ ಪ್ರಜ್ಞೆಯಲ್ಲಿ ಕೂಡಿ ಹಾಕಿದ್ದಾರೆ ಯಾಕೆ? ಏನಿದು ನನ್ನ ಭ್ರಮೆಗಳು ಎಂದು ಆತ ತನ್ನ ವಿರುದ್ಧವೇ ತಾನಿದ್ದ. ಲೋಕ ಕೆಟ್ಟಿದೆ ಎಂದು ತಾನೇ ಕೆಟ್ಟು ಹೋಗಿರುವುದ ಮರೆಯಬಾರದು ಎಂದುಕೊಂಡ. ಎಂದಾದರೂ ಮಲ್ಲಿಗೆ ಹೂಗಳು ಮುನಿದು ಅರಳುವುದನ್ನು ಬಿಟ್ಟಿವೆಯೇ… ಈ ನೀಚರ ದೇಹದಲ್ಲಿ ಯಾಕೆ ಸುಳಿಯಬೇಕೆಂದು ಯಾವತ್ತಾದರೂ ಗಾಳಿ ವಿರಸವಾಡಿದೆಯೆ… ಮಳೆ ಮಾರುತಗಳು ನಿಂತು ಬಿಟ್ಟಿದ್ದಾವೆಯೇ…
ತನಗೆ ಅಪಾರ ಶಕ್ತಿ ಇದೆ ಎಂದು ಭೂಗೋಳವನ್ನೆ ಭಸ್ಮ ಮಾಡುವೆ ಎಂದು ಎಂದಾದರೂ ಬೆಂಕಿಯು ದ್ವೇಷ ಮಾಡಿದೆಯೇ? ಇಲ್ಲವಲ್ಲಾ; ಹಾಗಿದ್ದ ಮೇಲೆ ನನಗೆ ಯಾಕೆ ಎಲ್ಲರ ಮೇಲೂ ಸಣ್ಣ ಪುಟ್ಟದ್ದಕ್ಕೆಲ್ಲ ಅಸಹನೆ, ತಿರಸ್ಕಾರ ಅಸಹಿಷ್ಣುತೆ… ಎಲ್ಲಿಂದ ಹುಟ್ಟಿತು ಮನುಷ್ಯರ ನಾಗರಿಕತೆಯ ಯಾವ ವ್ಯಾಜ್ಯದಲ್ಲಿ ವ್ಯಾಧಿಯಾಗಿ ವ್ಯಾಪಿಸಿತು! ಆದಿ ಮಾನವರಿಗೂ ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲವೇ…
ಅವರಿಗೂ ಲಯಕಾರ ಆನಂದ ತುಂಬಿತ್ತೇ; ಇಟ್ಲರನ ಡೆತ್ ಕ್ಯಾಂಪುಗಳು ಈಗಲೂ ಹಾಗೆಯೆ ತಣ್ಣಗೆ ಮಲಗಿವೆಯಲ್ಲ… ಬಹಳ ಕಾಲ ಆ ಒಂದೇ ಪ್ರಶ್ನೆಗೆ ಉತ್ತರ ಕಾಣದೆ; ಮೊದಲು ಈ ದೇವರ ಕೈಬಿಡಬೇಕೂ… ಅಸಹನೆ, ದ್ವೇಷಗಳಲ್ಲೂ ಅವನ ಪಾಲಿದೆ ಎಂದು ದೇಗುಲವನ್ನೇ ದೂರ್ತಸ್ಥಾನ ಎಂದು ತಿರಸ್ಕರಿಸಿದ. ತಲೆಗೆ ಹಿಡಿದಿದ್ದ ಲಯ ವಿನೋದ ಹಿಂಸೆ ಕರಗಿ ಕರಗಿ ಒಂದು ದಿನ ಮಹಾ ಮಳೆಯ ಮಹಾ ನದಿಯಲ್ಲಿ ತೆಪ್ಪದಲ್ಲಿ ಕೂತು ಕಡೆಗೋಲು ಮೀಟುತ್ತ ಮುಳುಗುತ್ತಿದ್ದ ಸೂರ್ಯನತ್ತ ಹೊರಟಿದ್ದ. ಆ ಸೂರ್ಯ ಎಂದೆಂದೂ ಮುಗಿಯದ ಆಗಸದತ್ತ ಅವನನ್ನು ಸೆಳೆದೊಯ್ಯುತ್ತಿತ್ತು.
*****
೪) ಕೊರೆವ ಚಳಿ. ಹಿಬ್ಬನಿಯ ಮುಸುಕು. ನೀರವ ರಾತ್ರಿ ಒಬ್ಬನೇ ಕೂತಿದ್ದಾನೆ ರಸ್ತೆ ಬದಿಯ ಕಲ್ಲು ಬೆಂಚಿನ ಮೇಲೆ ಯಾರು ಬರುವರೊ ಗೊತ್ತಿಲ್ಲ… ಅತ್ತ ಇತ್ತ ನೋಡುತ್ತಲೇ ಇದ್ದಾನೆ ಅಂತಹ ಕಡು ಚಳಿಯ ನಟ್ಟಿರುಳಲ್ಲಿ ಯಾರು ತಾನೆ ಬರುತ್ತಾರೆ… ಎಲ್ಲ ಅವೇಳೆಯ ಕಾಲಯಾಪನೆಯೆ ಅವನದು… ಸದ್ದೇ ಇಲ್ಲ. ಆಕಾಶ ಹೊದ್ದುಕೊಂಡಿದೆ ಚಳಿ ಮೋಡಗಳ ಉರಿಯುತ್ತಲೇ ಇವೆ ಬೀದಿಯ ದೀಪಗಳು ಯಾರು ಬಂದರೇನು ಹೋದರೇನು; ನಮಗೆ ನಾವೇ ದಿಕ್ಕಿಲ್ಲದ ದೀಪಗಳು ಎಂಬಂತೆ ಮಬ್ಬಾಗಿ ಬೆಳಗುತ್ತಲೇ ಇವೆ. ಬಿಕೊ ಎನ್ನುತ್ತಿವೆ ಬೀದಿಗಳೆಲ್ಲ. ನಿರ್ಜನ ಇರುಳ ಚಳಿಗಾಳಿ ಸುಮ್ಮನೆ ಏಕಾಂತದಲ್ಲಿ ಅಲ್ಲೆಲ್ಲ ಅಲೆಯುತ್ತಲೇ ಇದೆ. ಕಾಲ ಯಾವ ಧ್ಯಾನದಲ್ಲಿದೆಯೊ… ಈ ಕಾಲಕ್ಕೇ ಬೇಡವಾದವನೊ ಏನೊ ಅವನು ಒಬ್ಬನೆ ಅಂತಹ ನಡುಗುವ ಚಳಿಯಲ್ಲಿ ಯಾಕೆ ಕುಂತಿದ್ದಾನೆ… ಯಾವ ಒವರ್ ಕೋಟ್ ಕೂಡ ಇಲ್ಲ. ಕೊಕ್ಕರಿಸಿ ಕೊಂಡು ಏನನ್ನೊ ನೋಡುತ್ತಿದ್ದಾನೆ. ಬರುವಳೇ ಅವನ ಪ್ರೇಯಸಿ; ಎಲ್ಲಿಂದ ಬರಬೇಕೂ… ಮುಂದೆ ಎಲ್ಲಿಗೆ ಹೋಗುತ್ತಾನೆ… ಏನೊಂದೂ ಗೊತ್ತಿಲ್ಲ… ಎಲ್ಲಿಂದ ಬಂದನೊ… ಒಬ್ಬ ಮನುಷ್ಯಹೀಗೆ ನರಳುತ್ತ ಕಾಯುತ್ತ ಕೊನೆಗೆ ಎಷ್ಟು ನಗೆಯ ಹೂಬುಟ್ಟಿಗಳ ಹೊತ್ತುಕೊಂಡೊಯ್ಯುವನು… ಎಷ್ಟೊಂದು ಬೇಸರ ನಿರಾಸೆಗಳ ಎಳೆದುಕೊಂಡು ನಡೆವನು… ಇರುಳು ಮುಗಿದರೂ ಅಂತವರು ನಾಳೆ ನಾಳೆಯ ಇರುಳುಗಳನ್ನೆ ಕಾಯುತ್ತಲೇ ಇರುತ್ತಾರೆ… ಪುರಾತನ ಕಾಲದ ನಗರದ ಹಳೆಯ ಬೀದಿ. ಅವನಂತವರ ಎಷ್ಟು ಕಂಡಿತ್ತೊ ಏನೊ… ಆ ರಸ್ತೆಯೂ ಮೌನದಲ್ಲಿ ಕರಗುತಿತ್ತು.





