ಮೈಸೂರು: ಮಗಳನ್ನು ಚೆನ್ನಾಗಿ ಓದಿಸಬೇಕೆಂಬ ಹಂಬಲ ಅಪ್ಪನದು. ಅಪ್ಪ-ಅಮ್ಮನ ಕನಸನ್ನು ನೆರವೇರಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂದು ಹಗಲಿರುಳು ಓದಿದ ಫಲವಾಗಿ ಎಸ್.ಜಾಹ್ನವಿ ಜಿಲ್ಲೆಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಈಕೆ ಜೆಎಸ್ ಎಸ್ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಹೆಬ್ಬಾಳು ಎರಡನೇ ಹಂತದ ನಿವಾಸಿ ಶಿವಕುಮಾರ್ ಅವರ ಪುತ್ರಿಯಾಗಿದ್ದು, ಮುಂದೆ ಪಿಯುಸಿಯಲ್ಲೂ ಉತ್ತಮ ಅಂಕ ಪಡೆಯುವ ಅಭಿಲಾಷೆ ಹೊಂದಿದ್ದಾಳೆ.
ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಸಮೀಪವಿರುವ ಭಾರತೀಯ ವಿದ್ಯಾಭವನದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಎಸ್.ಜಾಹ್ನವಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಜಯನಗರದ ಸದ್ವಿದ್ಯಾ ಶಾಲೆಯ ಡಿ.ಎಸ್.ಧನ್ವಿ ಕೂಡ 625ಕ್ಕೆ 623 ಅಂಕ ಪಡೆದಿರುವ ಕಾರಣ ಇಬ್ಬರೂ ಜಿಲ್ಲೆಗೆ ಪ್ರಥಮರಾಗಿದ್ದಾರೆ.
ಕೆಆರ್‌ಎಸ್ ರಸ್ತೆಯಲ್ಲಿರುವ ಫಾಲ್ಕನ್ ಟೈರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ತಮ್ಮ ಮಗಳನ್ನು ಚೆನ್ನಾಗಿ ಓದಿಸುವ ಕನಸು ಹೊತ್ತಿದ್ದರು. ಆದರೆ, ಸ್ಥಗಿತಗೊಂಡ ಮೇಲೆ ಕುಟುಂಬ ನಿರ್ವಹಣೆಯ ಜತೆಗೆ ಮಗಳನ್ನು ಓದಿಸಬೇಕೆಂಬ ತುಡಿತದಿಂದಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದರು. ದೂರದ ಹೆಬ್ಬಾಳುವಿನಿಂದ ಬೆಂಗಳೂರು ರಸ್ತೆಯ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ಬಂದು ಕಾರ್ಯ ನಿರ್ವಹಿಸುತ್ತಿದ್ದರೂ ಮಗಳ ಓದಿನ ಹಿಂದೆ ನಿಂತಿದ್ದರು.
ಮಗಳು ಚೆನ್ನಾಗಿ ಓದಬೇಕೆಂದು ರಾತ್ರಿ 11 ಗಂಟೆ ತನಕ ಮತ್ತು ಬೆಳಿಗ್ಗೆ 5 ರಿಂದ ಎದ್ದು ಓದುವಂತೆ ನೋಡಿಕೊಳ್ಳುತ್ತಿದ್ದರು.ಅದೇ ರೀತಿ ಜಾಹ್ನವಿ ಕೂಡ ಸಮಯಕ್ಕೆ ಸರಿಯಾಗಿ ಓದುತ್ತಿದ್ದರು. ಈ ವೇಳೆ ಪ್ರಥಮ ಸ್ಥಾನ ಬಂದಿದ್ದಕ್ಕೆ ಖುಷಿ ಹಂಚಿಕೊಂಡ ಎಸ್.ಜಾಹ್ನವಿ, ಶಾಲೆಯಲ್ಲಿ ಶಿಕ್ಷಕರು ತುಂಬಾ ಹೋಮ್ ವರ್ಕ್ ಮಾಡಿಸುತ್ತಿದ್ದರು. ಟಾಪ್ ಸ್ಟೂಡೆಂಟ್‌ಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ಮಾಡುತ್ತಿದ್ದರಿಂದ ತುಂಬಾ ನೆರವಾಯಿತು. ಅಪ್ಪ, ಅಮ್ಮ ಕೂಡ ಸಹಕಾರ ನೀಡಿದ್ದರಿಂದ ಇಷ್ಟೊಂದು ಅಂಕ ಬರಲು ಕಾರಣವಾಯಿತು. ಕಷ್ಟಪಟ್ಟು ಓದಿದ್ದಕ್ಕೆ 623 ಅಂಕಗಳು ಬಂದಿದೆ, ದ್ವಿತೀಯ ಪಿಯುಸಿಯಲ್ಲೂ ಇದೇ ರೀತಿ ಟಾಪ್ ಆಗಿ ಬರುವ ಕನಸು ಹೊತ್ತಿದ್ದೇನೆ ಎಂದು ಹೇಳಿದರು. ಮಗಳನ್ನು ಓದಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದರೂ ಶ್ರಮಿಸಿದ್ದೇನೆ. ಮಗಳು ಜಿಲ್ಲೆಗೆ ಮೊದಲಿಗರಾಗಿ ಬಂದಿದ್ದು ಸಂತೋಷ. ನಾನು ಫಾಲ್ಕನ್ ಟೈರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ತುಂಬಾ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.