ಚಾಮರಾಜನಗರ: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆ ಮಂಗಳವಾರದ (ಅ.೭)ತನಕ ಶೇ.೯೮.೨೧ರಷ್ಟು ಪ್ರಗತಿ ಸಾಽಸಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಈ ಮುಂಚೆ ಕೊಪ್ಪಳ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದವು. ಮಂಗಳವಾರ ಮಧ್ಯಾಹ್ನ ೩.೧೫ರ ಹೊತ್ತಿಗೆ ಗಡಿ ಜಿಲ್ಲೆ ಚಾಮರಾಜನಗರ ಪ್ರಥಮ ಸ್ಥಾನವನ್ನು ತಲುಪಿದ್ದು ಬುಧವಾರವೂ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಸಮೀಕ್ಷೆ ಕಾರ್ಯ ಸೆ.೨೨ರಿಂದ ನಡೆಯುತ್ತಿದ್ದು ಇದೀಗ ಅ.೧೮ ರವರೆಗೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಿರುವುದ ರಿಂದ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸ ಜಿಲ್ಲಾಡಳಿತದ್ದಾಗಿದೆ.
ಗಮನಾರ್ಹ ಸಂಗತಿ ಎಂದರೆ, ಯಳಂದೂರು ಹಾಗೂ ಹನೂರು ತಾಲ್ಲೂಕುಗಳಲ್ಲಿ ಈಗಾಗಲೇ ಶೇ.೧೦೦ರಷ್ಟು ಸಮೀಕ್ಷೆ ಪೂರ್ಣ ಗೊಂಡಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಶೇ. ೯೯.೧೫, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ.೯೭.೪೧, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ. ೯೪.೬೬ರಷ್ಟು ಸಮೀಕ್ಷೆ ಮಂಗಳವಾರದವರೆಗೆ ಆಗಿದೆ. ಸಮೀಕ್ಷೆ ಪೂರ್ಣಗೊಳಿಸಲು ಮೊದಲಿಗೆ ಅ.೧೫ರವರೆಗೆ ಗಡುವು ನೀಡಲಾಗಿತ್ತು. ಹೀಗಾಗಿ ಎಡೆಬಿಡದೆ ಸಮೀಕ್ಷೆ ಮಾಡಿದ್ದು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನಲಾಗಿದೆ.
ಜಿಲ್ಲೆ ಸಮೀಕ್ಷೆಯಲ್ಲಿ ಈಗಾಗಲೇ ಶೇ.೯೮.೨೧ರಷ್ಟು ಪ್ರಗತಿ ಕಂಡಿರುವುದರಿಂದ ಉಳಿದಿರುವ ಕುಟುಂಬಗಳ ಸಮೀಕ್ಷೆಯನ್ನು ಅ.೧೮ರವರೆಗೆ ಮುಗಿಸಿ ಶೇ೧೦೦ರಷ್ಟು ಪ್ರಗತಿ ಸಾಽಸುವ ಲೆಕ್ಕಾಚಾರದಲ್ಲಿ ಜಿಲ್ಲೆಯ ಅಧಿಕಾರಿಗಳು ಇದ್ದಾರೆ. ಯಳಂದೂರು ಹಾಗೂ ಹನೂರು ತಾಲ್ಲೂಕುಗಳಲ್ಲಿ ಅದಾಗಲೇ ೧೦೦ರಷ್ಟು ಪ್ರಗತಿ ಆಗಿರುವುದರಿಂದ ಉಭಯ ತಾಲ್ಲೂಕುಗಳ ಸಮೀಕ್ಷಕರಿಗೆ ಬೇರೆ ಜವಾಬ್ದಾರಿ ವಹಿಸುವ ಚಿಂತನೆ ಮಾಡಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ಇತರ ಕಡೆಯಂತೆಯೇ ಸಮೀಕ್ಷೆಗಾಗಿ ಗಣತಿದಾರರು, ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷಾ ಕಾರ್ಯವನ್ನು ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಎಲ್ಲಾ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ.
ಗಣತಿದಾರರಿಗೆ ಗುರಿಯನ್ನು ನಿಗದಿಪಡಿಸಿ ಆಯಾ ದಿನದ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಮಧ್ಯೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರೂ ಜಿಲ್ಲೆಯ ವಿವಿಧ ಕಡೆ ಖುದ್ದು ಭೇಟಿ ನೀಡಿ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸಮೀಕ್ಷೆಯಲ್ಲಿ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಗಣತಿದಾರರು.
” ಸಮೀಕ್ಷಾ ಪ್ರಗತಿಯಲ್ಲಿ ಚಾ.ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಯಾವುದಾದರೂ ಕುಟುಂಬ ಕೈಬಿಟ್ಟು ಹೋಗಿದ್ದಲ್ಲಿ ಸಹಾಯವಾಣಿ ಸಂಖ್ಯೆ ೦೮೨೨೬-೨೨೩೧೬೦/೧೬೧/೧೬೩ ಮತ್ತು ಮೊಬೈಲ್ ಸಂಖ್ಯೆ ೯೭೪೦೯೪೨೯೦೧ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಅವರ ಗಣತಿ ಪೂರ್ಣಗೊಳಿಸಲಾಗುವುದು.”
-ಸಿ.ಟಿ.ಶಿಲ್ಪಾ ನಾಗ್, ಜಿಲ್ಲಾಧಿಕಾರಿ
ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ಕೂಂಬಿಂಗ್:
ಚಾ.ನಗರ: ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲದಿರುವ ಕಾಡಂಚಿನ ಗ್ರಾಮ/ಪೋಡು/ಹಾಡಿಗಳನ್ನು ಗುರುತಿಸಿ ಅವುಗಳನ್ನು ಕ್ಯಾಂಪ್ ಮೋಡ್ ಎಂದು ಪರಿಗಣಿಸಿ ನೆಟ್ ವರ್ಕ್ ದೊರಕುವ ಪ್ರದೇಶಗಳಲ್ಲಿ ಕ್ಯಾಂಪ್‌ಗಳನ್ನು ಸ್ಥಾಪಿಸಿ ವಿವಿಧ ಇಲಾಖೆಯ ಸರ್ಕಾರಿ ವಾಹನಗಳಲ್ಲಿ ಗ್ರಾಮಸ್ಥರನ್ನು ಕ್ಯಾಂಪ್‌ಗಳಿಗೆ ಕರೆದುಕೊಂಡು ಬಂದು ಸಮೀಕ್ಷೆ ನಡೆಸಲಾಗಿದ್ದು ಯಾವುದೇ ಮನೆಯು ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ಕೂಂಬಿಂಗ್ ನಡೆಸಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





