Mysore
29
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಬರಿದಾಗುತ್ತಿರುವ ಕಪಿಲೆಯ ಒಡಲಿಗೆ ಕೊಳಚೆ ನೀರು

ಕೈಗಾರಿಕೆಗಳ ತ್ಯಾಜ್ಯ, ಒಳಚರಂಡಿ ನೀರು ಸೇರಿ ಸ್ನಾನಘಟ್ಟದ ನೀರು ಕಲ್ಮಶ, ಸ್ನಾನ ಮಾಡುವ ಭಕ್ತರಿಗೆ ರೋಗದ ಭೀತಿ

ಎಸ್.ಎಸ್.ಭಟ್
ನಂಜನಗೂಡು : ಸುಡು ಬಿಸಿಲಿನಿಂದ ಕಪಿಲೆಯ ಒಡಲು ಬರಿದಾಗುತ್ತಿದೆ. ಅದರಿಂದಾಗಿ ಕಪಿಲಾ ನದಿಯ ನೀರಿನ ಹರಿವಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಹರಿವಿನ ಪ್ರಮಾಣದಲ್ಲಿ ಇಳಿಕೆಯೊಂದಿಗೆ ಕೈಗಾರಿಕೆಗಳ ತ್ಯಾಜ್ಯ ಹಾಗೂ ನಗರದ ಒಳಚರಂಡಿ ನೀರು ಸೇರಿ ಕಪಿಲಾ ನದಿಯ ಶ್ರೀಕಂಠೇಶ್ವರ ಸ್ನಾನಘಟ್ಟದ ನೀರು ಕಲ್ಮಶವಾಗಿ, ತೀರ್ಥಸ್ನಾನ ಮಾಡುವವರಿಗೆ ಭೀತಿ ತಂದೊಡ್ಡಿದೆ.

ಒಂದೆಡೆ ಕೈಗಾರಿಕಾ ನಗರ ನಂಜನಗೂಡಿನ ವಿವಿಧ ಕೈಗಾರಿಕೆಗಳ ತ್ಯಾಜ್ಯದ ನೀರು ಕಪಿಲೆಯ ಒಡಲು ಸೇರುತ್ತಿದ್ದರೆ, ಮತ್ತೊಂದೆಡೆ ನಗರಸಭೆಯ ಒಳ ಚರಂಡಿಯ ಅವಾಂತರದಿಂದಾಗಿ ನಗರದ ಮಲಿನ ನೀರು ಇಂದಿಗೂ ಕಪಿಲಾ ನದಿಗೇ ಬಂದು ಸೇರುತ್ತಿರುವು ದರಿಂದ ಯಾತ್ರಾರ್ಥಿಗಳು ಸ್ನಾನಘಟ್ಟದ ತೀರ್ಥ ಸ್ನಾನದ ಕುರಿತು ಜಾಗ್ರತೆ ವಹಿಸುವಂತೆ ಮಾಡಿದೆ.

ನದಿ ನೀರು ಮಲಿನವಾಗಿದ್ದು, ಚರ್ಮರೋಗಕ್ಕೆ ಆಹ್ವಾನ ಎಂದು ಭಾವಿಸಿ ನದಿ ದಡದಲ್ಲೇ ಇರುವ ದೇವಾಲಯದ ಕುದಿಸಿದ ನೀರಿನ ಸ್ನಾನದ ಆಶ್ರಯಕ್ಕೆ ಹೋಗೋಣ ಎಂದರೆ ಅಲ್ಲಿ ಬಕೆಟ್ ನೀರಿಗೆ ಕನಿಷ್ಠ 50 ರೂ. ಸುಲಿಗೆ ಮಾಡಲಾಗುತ್ತಿದೆ.

ಭಕ್ತರಿಂದ ಮಾಸಿಕ 2 ಕೋಟಿ ರೂ.ಗೂ ಹೆಚ್ಚು ಹುಂಡಿ ಆದಾಯವೇ ಇರುವ ಶ್ರೀಕಂಠೇಶ್ವರನ ದೇವಾಲಯದಲ್ಲಿ ಈಗ ನದಿನೀರಿನ ಸಾನ ಮಾಡಿದರೆ ಚರ್ಮರೋಗ, ಬಿಸಿ ನೀರಿನ ಮೊರೆ ಹೋದರೆ ಸುಲಿಗೆ ಎಂಬಂತಾಗಿದೆ.

2007ರಲ್ಲಿ ಕೇವಲ 7 ಕೋಟಿ ರೂ. ಯೋಜನೆ ಯೊಂದಿಗೆ ಆರಂಭವಾದ ಈ ಗರಳಪುರಿ ಒಳಚರಂಡಿ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿ, ಜನಪ್ರತಿ ನಿಧಿಗಳ ಅಸಹಾಯಕತೆಯಿಂದಾಗಿ 18 ತಿಂಗಳು ಎಂದರೆ 2009ಕ್ಕೆ ಪೂರ್ಣಗೊಳ್ಳುವ ಬದಲು ಇದೀಗ 200 ಕೋಟಿ ರೂ. ವೆಚ್ಚವಾಗಿದ್ದರೂ ಇನ್ನೂ ಹತ್ತು ವರ್ಷಗಳಾದರೂ ಪೂರ್ಣವಾಗುತ್ತದೆ ಎಂಬ ನಂಬಿಕೆ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಇಲ್ಲವಾಗಿದೆ.

ನಗರದ ಅನೇಕ ಕಡೆಯ ಕೊಳಚೆ ನೀರಿನ ಹರಿವಿನ ಪ್ರಮಾಣ ಕಪಿಲೆಗೆ ಸೇರುತ್ತಿರುವರಿಂದ ನಂಜನಗೂಡಿನ ನಾಗರಿಕರೆಲ್ಲರೂ ನಾಚಿಕೆ ಪಡುವವಂತಾಗಿದೆ. ಭಕ್ತರು ನೀಡಿದ ಕಾಣಿಕೆ ಹಣದಲ್ಲೇ ದೇವಾಲಯ ದಿಂದಭಕ್ತರಿಗೆ ಶುದ್ಧ ನೀರಿನ ತೀರ್ಥಸ್ನಾನದ ಸೌಲಭ್ಯ ಕಲ್ಪಿಸಿ ಅಥವಾ ಸೋಲಾರ್ ಅಳವಡಿಸಿ ಬಿಸಿ ನೀರು ನೀಡುವ ವ್ಯವಸ್ಥೆ ಮಾಡುವ ಮೂಲಕ, ಬಕೆಟ್ ನೀರಿಗೆ 50 ರೂ. ಸುಲಿಗೆ ನಿಲ್ಲಿಸಬೇಕು. ನದಿಯಲ್ಲಿ ಸ್ನಾನ ಮಾಡುವ ಲಕ್ಷಾಂತರ ಮಂದಿಗೆ ರೋಗತಗುಲುವುದನ್ನು ತಪ್ಪಿಸಬೇಕು ಎಂದು ಜನರು ದೇವಾಲಯದ ಆಡಳಿತಾಧಿಕಾರಿಗಳೂ ಆದ ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ದರ್ಶನ್ ಅವರನ್ನು ಆಗ್ರಹಿಸಿದ್ದಾರೆ.

ಶಾಸಕ ದರ್ಶನ್ ಧ್ರುವನಾರಾಯಣ ಒಳಚರಂಡಿ ಅವ್ಯವಸ್ಥೆ ಸರಿಪಡಿಸಲು ಮತ್ತೆ 22 ಕೋಟಿ ರೂ. ತಂದಿದ್ದು, ಅದು ಸದ್ಯದಲ್ಲೇ ಕಾರ್ಯಾರಂಭವಾಗಲಿದೆ. ಒಳಚರಂಡಿ ನೀರು ನದಿಗೆ ಸೇರುವ ಕುರಿತಂತೆ ತಕ್ಷಣ ಸಭೆ ಕರೆದು ಚರ್ಚಿಸಲಾಗುವುದು. ಬಸವರಾಜು, ನಗರಸಭೆ ಆಯುಕ್ತ

7 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ 2007ರಲ್ಲಿ ಆರಂಭವಾದ ನಗರದ ಒಳಚರಂಡಿ ಯೋಜನೆ ಈಗಾಗಲೇ 200 ಕೋಟಿ ರೂ. ದಾಟಿ ಮತ್ತೆ 22 ಕೋಟಿ ರೂ. ಮಂಜೂರಾಗಿದ್ದರೂ ಅದು 27 ವರ್ಷಗಳು ಕಳೆದರೂ ಪೂರ್ಣಗೊಳ್ಳುವ ವಿಶ್ವಾಸವಿಲ್ಲವಾಗಿದೆ. ಈ ವಿಳಂಬದ ಅನಾಹುತಕ್ಕೆ ಒಳಚರಂಡಿ ಮಂಡಳಿಯ ಅಧಿಕಾರಿಗಳೇ ಕಾರಣ ವಾಗಿದ್ದು, ಅವರ ಮೇಲೆ ಕ್ರಮ ಜರುಗಿಸಬೇಕಿದೆ. ಸಿ.ಸುಬ್ಬಣ್ಣ, ನಿವೃತ್ತ ಪ್ರಾಚಾರ್ಯರು, ಜೆಎಸ್‌ಎಸ್ ಕಾಲೇಜು, ನಂಜನಗೂಡು

ದೇವಾಲಯದಲ್ಲಿ ಬಿಸಿ ನೀರಿನ ಸುಲಿಗೆ ಕುರಿತಂತೆ ಈಗಾಗಲೇ ಅಲ್ಲಿನ ಸಿಬ್ಬಂದಿಗೆ ಎರಡು ನೋಟಿಸ್ ನೀಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಸೂಚನೆಗಾಗಿ ಕಾಯಲಾಗುತ್ತಿದೆ. ಉಚಿತ ಬಿಸಿ ನೀರಿನ ಸ್ನಾನಕ್ಕಾಗಿ
ಟೆಂಡರ್ ಕರೆಯುವ ಯೋಜನೆ ಸಿದ್ಧಪಡಿಸಲಾಗುತ್ತಿದೆ.
• ಸಿ.ಜೆ.ಕೃಷ್ಣ, ಇಒ, ಶ್ರೀಕಂಠೇಶ್ವರ ದೇವಾಲಯ

 

Tags:
error: Content is protected !!