Mysore
25
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೀಪಾವಳಿ ಜಾತ್ರೆಯಲ್ಲಿ 2.16 ಕೋಟಿ ರೂ. ಸಂಗ್ರಹ

ಮಹದೇಶ್ವರ ಬೆಟ್ಟದಲ್ಲಿ ೫ ದಿನಗಳ ಕಾಲ ನಡೆದ ಉತ್ಸವ ; ವಿವಿಧ ಸೇವೆಗಳು, ಲಾಡು ಮಾರಾಟದಿಂದ ಹೆಚ್ಚಿನ ಆದಾಯ

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ೫ ದಿನಗಳ ಕಾಲ ಜರುಗಿದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸೇವೆಗಳು, ಉತ್ಸವಗಳು, ಲಾಡು ಮಾರಾಟ, ಇನ್ನಿತರ ಸೇವೆಗಳಿಂದ ಒಟ್ಟು ೨.೧೬ ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಮ.ಬೆಟ್ಟದಲ್ಲಿ ಅ.೧೮ ರಿಂದ ೨೨ರವರೆಗೆ ದೀಪಾವಳಿ ಜಾತ್ರೆ ಜರುಗಿದ್ದು, ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ೫ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ೫ ದಿನಗಳ ಅವಧಿಯಲ್ಲಿ ಹುಲಿವಾಹನ, ರುದ್ರಾಕ್ಷಿ ವಾಹನ, ಬಸವ ವಾಹನ, ಚಿನ್ನ ಹಾಗೂ ಬೆಳ್ಳಿ ತೇರಿನ ಉತ್ಸವಗಳು, ಪಂಚಕಳಸ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಪಂಚಾಮೃತ ಅಭಿಷೇಕ, ಇನ್ನಿತರ ಸೇವೆಗಳು ಜರುಗಿವೆ. ಜತೆಗೆ ಲಾಡು, ತೀರ್ಥ, ಮಿಶ್ರ ಪ್ರಸಾದ, ಕಲ್ಲು ಸಕ್ಕರೆ, ಬ್ಯಾಗ್ ಮಾರಾಟ, ಪಡಿ ಸೇವೆ, ವಿಶೇಷ ಪ್ರವೇಶ ಶುಲ್ಕ, ಪುದುವಟ್ಟು ಠೇವಣಿ, ಇನ್ನಿತರ ಸೇವಾ ಮೂಲಗಳಿಂದ ಒಟ್ಟು ೨,೧೬,೪೫,೦೨೦ ರೂ. ಹಣ ಸಂಗ್ರಹವಾಗಿದೆ.

ಉತ್ಸವಗಳಿಂದ ಹೆಚ್ಚು ಆದಾಯ: ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಾಡು ಮಾರಾಟದಿಂದ ೬೩,೭೦,೭೨೫ ರೂ., ವಿಶೇಷ ಪ್ರವೇಶ ಶುಲ್ಕದಿಂದ ೫೨,೧೬,೨೫೦ ರೂ., ಮಿಶ್ರಪ್ರಸಾದದಿಂದ ೬,೭೮,೧೨೫, ಮಾಹಿತಿ ಕೇಂದ್ರದಿಂದ ೨,೭೫,೫೫೦ ವಿಶೇಷ ಪ್ರವೇಶ ಶುಲ್ಕದಿಂದ ೫೨,೧೬,೨೫೦ ಪುದುವಟ್ಟಿನಿಂದ ೧,೯೯.೨೨೬ ರೂ, ಪಡಿ ಸೇವೆಯಿಂದ೧,೯೦,೦೫೦ ರೂ., ಬ್ಯಾಗ್ ಮಾರಾಟದಿಂದ ೧,೦೬,೯೬೫ ರೂ., ಇತರ ಸೇವಾ ಮೂಲದಿಂದ ೧,೦೭,೭೦೦ ರೂ., ದೇಗುಲದಲ್ಲಿ ನಡೆದ ಚಿನ್ನ, ಬೆಳ್ಳಿ ತೇರಿನ ಉತ್ಸವ, ಬಸವ, ರುದ್ರಾಕ್ಷಿ ಹಾಗೂ ಹುಲಿ ಉತ್ಸವಾದಿ ಸೇವೆಗಳಿಂದ ೭೬,೩೫,೯೯೯ ರೂ. ಸಂಗ್ರಹವಾಗಿದೆ. ಕಳೆದ ವರ್ಷ ದೀಪಾವಳಿ ಜಾತ್ರಾ ದಿನಗಳಲ್ಲಿ ವಿಶೇಷ ಪ್ರವೇಶ ಶುಲ್ಕದಿಂದ ೬೫,೩೪,೨೫೦ ರೂ., ಲಾಡು ಮಾರಾಟದಿಂದ ೫೮,೩೩,೯೨೫ ರೂ. ಸೇರಿ ಒಟ್ಟು ೨,೪೩,೫೬,೪೩೬ ರೂ. ಸಂಗ್ರಹವಾಗಿತ್ತು.

ಇದನ್ನು ಓದಿ: ನಾವು ಈಗ ಇರುವುದು ಮೈಸೂರೋ ಅಲ್ಲವೋ!

ಲಾಡು ಮಾರಾಟ ಹೆಚ್ಚಳ: 

ಮ.ಬೆಟ್ಟದಲ್ಲಿ ತಯಾರಿಸುವ ಲಾಡು ಉತ್ಕ ಷ್ಟ ಗುಣಮಟ್ಟದಿಂದ ಕೂಡಿದ್ದು, ಭಕ್ತರು ಮಾದಪ್ಪನ ಮಹಾಪ್ರಸಾದವೆಂದು ಭಾವಿಸಿ ತಪ್ಪದೇ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ. ೨೦೨೩ರ ದೀಪಾವಳಿಯಲ್ಲಿ ಜಾತ್ರಾ ವೇಳೆ ಲಾಡು ಮಾರಾಟದಿಂದ ೫೪,೬೮,೫೦೦ ರೂ. ಗಳಿಸಿದ್ದರೆ, ೨೦೨೪ರಲ್ಲಿ ೫೮,೩೩,೯೨೫ರೂ. ಬಂದಿತ್ತು. ಈ ಬಾರಿ ಲಾಡು ಮಾರಾಟದಿಂದ ೬೩,೭೦,೭೨೫ ರೂ. ಬಂದಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಲಾಡು ಮಾರಾಟ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

” ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸೇವಾ ಮೂಲಗಳಿಂದ ಪ್ರಾಧಿಕಾರಕ್ಕೆ ೨.೧೬ ಕೋಟಿ ರೂ. ಆದಾಯ ಹರಿದು ಬಂದಿದೆ. ಮಹಾ ರಥೋತ್ಸವದ ದಿನ ನಿರಂತರ ಮಳೆ ಇದ್ದರೂ ಲಾಡು ಮಾರಾಟ ಸ್ವಲ್ಪ ಹೆಚ್ಚಳವಾಗಿದೆ. ಉಳಿದಂತೆ ಜಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಾರ್ತಿಕ ಮಾಸ ಪ್ರಾರಂಭವಾಗಿದ್ದು, ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಿರುಪತಿ ಮಾದರಿಯಲ್ಲಿ ಭಕ್ತಾದಿಗಳಿಗೆ ನೀಡಲಾಗುವ ಲಾಡುವಿನಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಹೆಚ್ಚಿನ ಭಕ್ತರು ಖರೀಸುತ್ತಿದ್ದು, ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಈ ಬಾರಿಯ ಜಾತ್ರಾ ಮಹೋತ್ಸವದ ಬಗ್ಗೆ ಭಕ್ತಾದಿಗಳು ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸ ತಂದಿದೆ.”

-ಎ.ಈ.ರಘು, ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಮಹಾದೇಶ್ ಎಂ.ಗೌಡ

Tags:
error: Content is protected !!