ಸಿರಿ ಮೈಸೂರು
ಹೀಗೇ ಒಮ್ಮೆ ಮೈಸೂರಿನ ಅಗ್ರಹಾರದಲ್ಲಿ ಒಂದು ಬೇಕರಿಗೆ ಹೋದೆ. ಟೀ ಆರ್ಡರ್ ಮಾಡಿ ಕುಳಿತೆ. ಅಲ್ಲಿ ಹೆಚ್ಚೇನೂ ಜನರು ಇರದಿದ್ದ ಕಾರಣ ಅಂಗಡಿಯವರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಸುತ್ತಿತ್ತು. ಆದರೆ ಸ್ವಲ್ಪವೂ ಅರ್ಥವಾಗಲಿಲ್ಲ. ಏಕೆಂದರೆ ಅವರು ಮಾತನಾಡುತ್ತಿದ್ದುದು ಮಲಯಾಳಂ ಭಾಷೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಕಾಲೇಜು ವಿದ್ಯಾರ್ಥಿಗಳ ದಂಡೇ ಬಂತು. ಅಲ್ಲೇ ಪಕ್ಕದಲ್ಲಿರುವ ಜೆಎಸ್‌ಎಸ್ ಸಂಸ್ಥೆಯಲ್ಲಿ ಓದುತ್ತಿದ್ದವರು. ಬೇಕರಿಯವರು, ವಿದ್ಯಾರ್ಥಿಗಳು ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರು. ಇಡೀ ಬೇಕರಿ ಮಲಯಾಳಮಯವಾಯಿತು. ನನ್ನ ಪಕ್ಕವೇ ಕುಳಿತ ಹುಡುಗಿಯೊಬ್ಬಳನ್ನು ‘ನೀವೆಲ್ರೂ ಕೇರಳದವರಾ?’ ಎಂದು ಕೇಳಿದೆ. ‘ಹಾ… ಓದಕ್ಕೆ ಇಲ್ಲಿಗೆ ಬಂದಿರೋದು’ ಎಂದಳು. ‘ಆಮೇಲೆ ಕೇರಳದಲ್ಲಿ ಕೆಲಸ ಮಾಡ್ತೀರ?’ ಎಂದೆ. ‘ಇಲ್ಲ ಇಲ್ಲ. ಇಲ್ಲೇ ಓದ್ತೀವಿ, ಇಲ್ಲೇ ಇರ್ತೀವಿ. ಇರೋಕೆ ಮೈಸೂರಿಗಿಂತ ಒಳ್ಳೆ ಜಾಗ ಬೇಕಾ?’ ಎಂದು ಉತ್ತರಿಸಿದಳು. ಮನಸ್ಸಲ್ಲೇ ನಕ್ಕು ಸುಮ್ಮನಾದೆ.
ಈ ಘಟನೆ ನಡೆದಿದ್ದು ೨೦೧೯ರಲ್ಲಿ. ಆಗ ನನಗೆ ಈ ಸಂಭಾಷಣೆ ಅಷ್ಟೇನೂ ಮುಖ್ಯ ಅನಿಸಲಿಲ್ಲ. ಆದರೆ ಈಗ ಮೈಸೂರನ್ನು ನೋಡಿದರೆ ಒಂದು ಕ್ಷಣ ನಿಬ್ಬೆರಗಾಗುವುದು ಖಂಡಿತ. ಅದರಲ್ಲೂ ಮೈಸೂರನ್ನು ಕಳೆದ ಕೆಲವು ದಶಕಗಳ ಹಿಂದೆ ಅಥವಾ ಬಹಳಷ್ಟು ದಶಕಗಳಿಂದ ನೋಡುತ್ತಿರುವವರು ಇಂದಿನ ಮೈಸೂರನ್ನು ಮಿನಿ ಕೇರಳ ಎನ್ನುತ್ತಾರೆ. ಆರು ವರ್ಷಗಳ ಹಿಂದೆ ಅಗ್ರಹಾರದಲ್ಲಿ ಮಾತ್ರ ಈ ಪರಿಸ್ಥಿತಿ ಇದೆ ಎಂದುಕೊಂಡಿದ್ದ ನನಗೆ, ಆನಂತರ ತಿಳಿದದ್ದು ಮೈಸೂರಿನ ಬಹಳಷ್ಟು ಪ್ರಮುಖ ಸ್ಥಳಗಳದ್ದು ಇದೇ ಸ್ಥಿತಿ ಎಂಬ ಸತ್ಯ.
ಆ ದಿನ ಆ ಬೇಕರಿಯಲ್ಲಿ ಬರೀ ಮಲಯಾಳಂ ಕೇಳಿಸುತ್ತಿತ್ತು. ಈಗ ಹೆಚ್ಚೂ ಕಡಿಮೆ ಇಡೀ ಮೈಸೂರಿನಲ್ಲಿ ಬರೀ ಅದೇ ಭಾಷೆ ಕೇಳಿಸುತ್ತದೆ. ಮೈಸೂರಿನಲ್ಲಿ ಹುಟ್ಟಿ-ಬೆಳೆದ ನನ್ನಂತಹ ಯಾರಿಗೇ ಆದರೂ, ಅದರಲ್ಲೂ ಬೆಂಗಳೂರಿನ ಬದಲಾವಣೆಯನ್ನು ಬಹಳ ಹತ್ತಿರದಿಂದ ನೋಡಿರುವವರಿಗೆ ಇಂತಹ ಬೆಳವಣಿಗೆಗಳು ಭೀತಿ ಹುಟ್ಟಿಸುತ್ತವೆ. ಅಂದಹಾಗೆ ‘ವಲಸೆ’ ಎಂಬೊಂದು ಸಾಮಾನ್ಯ ಬೆಳವಣಿಗೆಯಿಂದಾಗಿ ನಮಗೆ ಭಯ ಆಗುವುದು ಏಕೆ? ಒಂದು ನಗರ ಬೇರೆ ಯಾರನ್ನೂ ಒಳಗೆ ಸೇರಿಸಲೇಬಾರದೆ? ಹೀಗೆಯೇ ಆದರೆ ನಾಗರಿಕತೆಗಳು ಸೃಷ್ಟಿಯಾಗುವುದು, ಬೆಳೆಯುವುದು ಹೇಗೆ? ಇಂತಹ ಪ್ರಶ್ನೆಗಳೆಲ್ಲಾ ಎಲ್ಲರಿಗೂ ಬಂದೇ ಬರುತ್ತವೆ. ಆದರೆ ದೇಶದ ಸುಶಿಕ್ಷಿತ ರಾಜ್ಯಗಳ ಜನರೂ ಶಿಕ್ಷಣಕ್ಕೆ ಬೇರೆ ರಾಜ್ಯಗಳಿಗೆ ವಲಸೆ ಬರುವುದೇಕೆ? ಬಂದವರು ಇಲ್ಲೇ ಖಾಯಂ ಆಗಿ ನೆಲೆಸುತ್ತಿರುವುದೇಕೆ? ಮೈಸೂರಿನವರು ಮೈಸೂರಿನಲ್ಲೇ ತಮ್ಮ ಕಣ್ಣೆದುರಿಗಿದ್ದ ಅವಕಾಶಗಳನ್ನು ನೋಡದೆ ಉಳಿದರೆ? ಆ ಅವಕಾಶಗಳನ್ನು ಹೊರಗಿನವರು ಬಂದು ಸದುಪಯೋಗ ಮಾಡಿಕೊಳ್ಳು ತ್ತಿದ್ದಾರೆಯೇ? ಹಾಗಾದರೆ ಇನ್ನೊಂದೆರಡು ದಶಕಗಳ ನಂತರ ಮೈಸೂರು ಮೈಸೂರಾಗೇ ಉಳಿಯುತ್ತದೋ ಅಥವಾ ವಲಸಿಗರಿಗೆ ದಕ್ಕಿದ ವರವಾಗುತ್ತದೋ ಎಂಬುದು ಸಾಮಾನ್ಯ ಮೈಸೂರಿಗರನ್ನು ಕಾಡುತ್ತಿರುವ ಪ್ರಶ್ನೆಗಳು. ಹಾಗೆಂದ ಮಾತ್ರಕ್ಕೆ ಇದು ಕೇರಳದ ಜನರಿಗೆ ಮಾತ್ರ ಅನ್ವಯಿಸುವುದಿಲ್ಲ. ವಿಷಯ ಶುರುವಾಗಿದ್ದು ಅಲ್ಲಿನ ಜನರಿಂದ ಆದರೂ ಮೈಸೂರಿಗೆ ಬೇರೆ ಬೇರೆ ರಾಜ್ಯಗಳು, ಜಿಲ್ಲೆಗಳಿಂದ ಜನರು ಬರುತ್ತಿದ್ದಾರೆ ಎಂಬುದು ಮೈಸೂರಿಗರೆಲ್ಲರಿಗೂ ತಿಳಿದಿರುವ ಸಂಗತಿ.
ಹೌದು… ನಾವೆಲ್ಲರೂ ಭಾರತೀಯರು. ಒಂದೇ ತಾಯಿಯ ಮಕ್ಕಳು. ಎಲ್ಲರೂ ಒಗ್ಗಟ್ಟಾಗಿರಬೇಕು. ಇವೆಲ್ಲವೂ ಸತ್ಯ. ಆದರೆ ಇದರ ಪರಿಣಾಮವಾಗಿ ಒಂದು ಸ್ಥಳ ತನ್ನ ಮೂಲ ರೂಪವನ್ನೇ ಬದಲಾಯಿಸಿಕೊಳ್ಳುವಂತಾ ದರೆ ಹೇಗೆ? ಆಯಾ ಸ್ಥಳದ ಸಂಸ್ಕ ತಿ, ವೈಶಿಷ್ಟ್ಯತೆ ಉಳಿಯುವುದು ಹೇಗೆ? ನಮ್ಮ ಸಂಸ್ಕ ತಿಯನ್ನು ನಾವು ಉಳಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಟ್ಟರೆ, ನಾವು ಇತರ ರಾಜ್ಯಗಳ ಜನರನ್ನು ದ್ವೇಷಿಸುತ್ತೇವೆ ಎಂಬ ಪಟ್ಟ ಬಂದುಬಿಡುತ್ತದೆ? ಖಂಡಿತ ಈ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇರಲಿಕ್ಕಿಲ್ಲ. ಉದ್ಯೋಗಾವಕಾಶಗಳಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿ ಹೇಗೆ ಮಾರ್ಪಾಡಾಯಿತು, ಎರಡ್ಮೂರು ದಶಕಗಳಲ್ಲೇ ಹೇಗೆ ಸಂಪೂರ್ಣವಾಗಿ ಪರಿವರ್ತನೆಯಾಯಿತು, ಈಗ ಬೆಂಗಳೂರಿಗಿದ್ದ ಮೂಲ ಸೊಗಡು ಹೇಗೆ ನಶಿಸುವತ್ತ ಸಾಗುತ್ತಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕಾರಣ ಬೇರೆಯಾದರೂ ಮೈಸೂರು ಇದೇ ದಾರಿಯಲ್ಲಿ ಸಾಗುತ್ತಿದೆ. ಮೈಸೂರು ಪ್ರಶಾಂತವಾದ ಸ್ಥಳ. ಹಸಿರು ತುಂಬಿದ, ಟ್ರಾಫಿಕ್ ಹಾಗೂ ಜಂಜಾಟ ಇರದ ನಗರ. ಮೈಸೂರು ಸಂಸ್ಥಾನವನ್ನಾಳಿದ ಒಡೆಯರ್ ಮನೆತನದ ದೂರದೃಷ್ಟಿ ಯಿಂದ ನೆಮ್ಮದಿ ಹಾಗೂ ಉತ್ತಮ ಜೀವನಶೈಲಿಯನ್ನು ಎಲ್ಲರಿಗೂ ಧಾರಾಳವಾಗಿ ನೀಡುತ್ತಿರುವ ನಗರ. ಈಗಂತೂ ಸರ್ಕಾರ ಮೈಸೂರಿನಲ್ಲಿ ಕಾರ್ಯರೂಪಕ್ಕೆ ತರಲಿರುವ ಯೋಜನೆಗಳ ದೆಸೆಯಿಂದಾಗಿ ಮೈಸೂರಿನ ಮೌಲ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಇತ್ತ ಹಳ್ಳಿಗಳಿಂದ ಉದ್ಯೋಗ ಅರಸಿ ಬರುವವರಿಗೆ, ಅತ್ತ ಬೃಹತ್ ನಗರಗಳಿಂದ ನೆಮ್ಮದಿ ಅರಸಿ ಬರುವವರಿಗೆ, ಮತ್ತೊಂದೆಡೆ ವಿಪರೀತ ಬಿಸಿಲು ಅಥವಾ ಮಳೆ ತಾಳಲಾರದೆ ಹಿತಮಿತವಾದ ವಾತಾವರಣ ಅರಸಿ ಬರುವವರಿಗೆ, ಬೇಸರವಾದಾಗ ಹೋಗಲು ದೇವಸ್ಥಾನಗಳೋ, ಕಾಡೋ, ಸಮುದ್ರವೋ, ಬೆಟ್ಟವೋ ಕೆಲವೇ ಗಂಟೆಗಳ ದೂರದಲ್ಲಿರಬೇಕು ಎಂದು ಬಯಸುವ ವರಿಗೆ… ಹೀಗೆ ಅದೆಷ್ಟೋ ಜನರಿಗೆ ಮೈಸೂರು ನೂರಾರು ರೀತಿಯ ಅನುಕೂಲಗಳನ್ನು ಮಡಿಲಲ್ಲಿಟ್ಟುಕೊಂಡು ಆಶ್ರಯ ಕೊಡುತ್ತಿದೆ. ಇದು ಮೈಸೂರಿಗರಿಗೆ ಒಂದು ರೀತಿ ಯಲ್ಲಿ ಹೆಮ್ಮೆಯಾದರೆ ಇನ್ನೊಂದು ರೀತಿಯಲ್ಲಿ ಗೋಜಲು.
‘ನಮ್ಮ ಊರು ಇಷ್ಟೆಲ್ಲಾ ಜನರಿಗೆ ಆಶ್ರಯ ನೀಡುತ್ತಿದೆಯಲ್ಲಾ!’ ಎಂದು ಒಂದು ಕ್ಷಣ ಹೆಮ್ಮೆಯಾದರೆ ಮರುಗಳಿಗೆಯೇ ‘ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮೂರಿನಲ್ಲಿ ನಾವೇ ಹೊರಗಿನವರಾಗಿಬಿಡುತ್ತೇವಾ?’ ಎಂಬ ಪ್ರಶ್ನೆ ಕಾಡುತ್ತದೆ. ಇದು ಬೇರೆಯವರ ಮೇಲಿನ ದ್ವೇಷವಂತೂ ಅಲ್ಲ. ಬದಲಿಗೆ ‘ನಮ್ಮನೆಯಲ್ಲಿ ನಾವು ಬೆಳೆಸಿದ ಹೂಗಿಡದಲ್ಲಿ ನೀವೇಕೇ ಹೂವು ಕೀಳುತ್ತೀರ?’ ಎಂದು ಹಿರಿಯರು ಕೇಳುವ ಪ್ರಶ್ನೆಯ ಹಿಂದೆ ಇರುತ್ತದಲ್ಲ… ಅದೇ ರೀತಿಯ ಸಣ್ಣ ಅಭದ್ರತೆ.
ಇಲ್ಲಿಗೆ ಬರುವ ಜನ ನಮ್ಮ ನಗರವನ್ನು ನಾವು ನೋಡಿಕೊಂಡಷ್ಟೇ ಚೆಂದವಾಗಿ ನೋಡಿಕೊಂಡು ನಮ್ಮಲ್ಲಿ ಈಗಾಗಲೇ ಇರುವ ನಮ್ಮತನವನ್ನ ಗೌರವಿಸಿ ನಮ್ಮಲ್ಲೊಬ್ಬರಾಗಿ ಜೀವನ ಮಾಡಿ ನಮ್ಮ ಅಭದ್ರತೆಯನ್ನ ಹೋಗಲಾಡಿ ಸುತ್ತಾರಾ ಅಥವಾ ‘ನೀವು ಹೆದರಿದ್ದು ಸರಿಯಿದೆ. ನಾವು ಮೈಸೂರಿನ ಸ್ವಂತಿಕೆಯನ್ನು ಕಸಿದು ಬೆಂಗಳೂರಿನಂತೆ ಇದನ್ನೂ ನಮ್ಮ-ನಮ್ಮ ರಾಜ್ಯ ಮಾಡಿಕೊಂಡು ಬಿಡುತ್ತೇವೆ’ ಎನ್ನುತ್ತಾರಾ ಎಂಬ ಪ್ರಶ್ನೆಗೆ ಕಾಲವೆಂಬ ಕಾಲ ಮಾತ್ರವೇ ಉತ್ತರಿಸಬೇಕಿದೆ. ಆ ಉತ್ತರಕ್ಕೆ ಮೈಸೂರಿಗರು ಇನ್ನೊಂದಷ್ಟು ದಸರಾ ಹಬ್ಬಗಳನ್ನು ಕಳೆಯಬೇಕಿದೆ.
” ‘ನಮ್ಮ ಮೈಸೂರು ಇಷ್ಟೆಲ್ಲಾ ಜನರಿಗೆ ಆಶ್ರಯ ನೀಡುತ್ತಿದೆಯಲ್ಲಾ!’ ಎಂದು ಒಂದು ಕ್ಷಣ ಹೆಮ್ಮೆಯಾದರೆ ಮರುಘಳಿಗೆಯೇ ‘ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮೂರಿನಲ್ಲಿ ನಾವೇ ಹೊರಗಿನವರಾಗಿ ಬಿಡುತ್ತೇವಾ?’ ಎಂಬ ಪ್ರಶ್ನೆಯೂ ಕಾಡುತ್ತದೆ”





