ಮಂಜು ಕೋಟೆ
ಮಚ್ಚೂರು ಬಳಿ ಕಿತ್ತುಬರುತ್ತಿದ್ದ ಡಾಂಬರನ್ನು ತೋರಿಸಿ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆಕ್ರೋಶ
ಹೆಚ್.ಡಿ.ಕೋಟೆ: ತಾಲ್ಲೂಕಿನ ಮೈಸೂರು ಮತ್ತು ಮಾನಂದವಾಡಿ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ನಿವಾಸಿಗಳೇ ಡಾಂಬರನ್ನು ಕಿತ್ತು ತೋರಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಹೊರರಾಜ್ಯದ ಹೆದ್ದಾರಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ತಾಲ್ಲೂಕಿನ ಗಡಿಭಾಗದ ಬಾವಲಿಯಿಂದ ಕಾಕನ ಕೋಟೆವರೆಗಿನ ೧೧ ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ೨೦ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಗುತ್ತಿಗೆದಾರ ಹಾಗೂ ಅಧಿಕಾರಿಗಳು ಕಾಮಗಾರಿ ಯನ್ನು ಭರದಿಂದ ನಡೆಸದೆ ವಿಳಂಬವಾಗಿ ಕೈಗೆತ್ತಿಕೊಂಡು ಕಳೆದ ವಾರದಿಂದ ಬಾವಲಿ ಕಡೆಯಿಂದ ಕೋಟೆ ಕಡೆಗೆ ರಸ್ತೆಯ ದಾಂಬರೀಕರಣ ನಡೆಸುತ್ತಿದ್ದಾರೆ.
ಗುತ್ತಿಗೆದಾರರು ೩ ದಿನಗಳ ಹಿಂದೆ ಮಚ್ಚೂರು ಬಳಿ ರಸ್ತೆಗೆ ಡಾಂಬರೀಕರಣ ಮಾಡಿದ್ದು, ಇಲ್ಲಿನ ನಿವಾಸಿಗಳು ಕಾಮಗಾರಿ ಕಳಪೆಯಿಂದ ಕೂಡಿರುವುದನ್ನು ಗಮನಿಸಿ, ಡಾಂಬರು ಕಿತ್ತುಬರುತ್ತಿದ್ದನ್ನು ಕಂಡು ಆಕ್ರೋಶಗೊಂಡು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಟ್ಯಂತರ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ತೀರಾ ಕಳಪೆಯಾಗಿದೆ. ಅಧಿಕಾರಿಗಳು ಇಲ್ಲದೆ ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಕಾಮಗಾರಿಯನ್ನು ನಿಲ್ಲಿಸಿ ಅಲ್ಲಿದ್ದ ಕೂಲಿ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಅಧಿಕಾರಿ ಬರಬೇಕು ಎಂದು ಪಟ್ಟು ಹಿಡಿದಾಗ ಆಗಮಿಸಿದ ಅಧಿಕಾರಿಗಳಾದ ರಮೇಶ್ ಮತ್ತು ಸುಬ್ರಹ್ಮಣ್ಯ ಅವರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ, ಡಾಂಬರೀಕರಣವನ್ನು ಸಮರ್ಪಕವಾಗಿ ಮಾಡಬೇಕಾಗಿತ್ತು. ಕೆಲವೊಂದು ಲೋಪವಾಗಿರುವುದರಿಂದ ಅದನ್ನು ಸರಿಪಡಿಸಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು. ಆದರೆ, ಇದಕ್ಕೆ ಒಪ್ಪದ ಇಲ್ಲಿನ ನಿವಾಸಿಗಳು ಇಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ತಿಳಿಸಿ ವಾಪಸ್ ಕಳಿಸಿದ್ದಾರೆ.
” ಹೆದ್ದಾರಿಯಲ್ಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದು, ಇದರಿಂದ ಈ ಭಾಗದ ನಿವಾಸಿಗಳು ಬೇಸತ್ತು ಕಳಪೆ ಕಾಮಗಾರಿಯನ್ನು ಬಯಲು ಮಾಡಿ ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿ ದ್ದಾರೆ. ಜನಪ್ರತಿನಿಽಗಳು, ಅಧಿಕಾರಿಗಳು, ಗುತ್ತಿಗೆದಾರರು ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ.”
-ರವಿ, ಸುಬ್ರಹ್ಮಣ್ಯ, ಮಣಿ, ಗುಂಡತ್ತೂರು ಗ್ರಾಮದ ನಿವಾಸಿಗಳು
” ಮೈಸೂರು-ಮಾನಂದವಾಡಿ ಹೆದ್ದಾರಿಯ ಕಾಮಗಾರಿ ಕೆಲಸದಲ್ಲಿ ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿರುವುದರಿಂದ ಅವರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದೇನೆ. ಯಾವುದೇ ಕಳಪೆ ಕೆಲಸ ನಡೆಯಲು ನಾನು ಬಿಡುವುದಿಲ್ಲ
-ರಮೇಶ್, ಎಇಇ, ಪಿಡಬ್ಲ್ಯುಡಿ ಇಲಾಖೆ





