Mysore
25
overcast clouds
Light
Dark

ಓದುಗರ ಪತ್ರ: ಚುನಾವಣೆಯ ಕೊನೆಯ ಘಟ್ಟದಲ್ಲಿ ಈ ಆದೇಶ ಏಕೆ?

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ ಯಾರೂ ಕೂಡ ಸಮಾಜ ಒಡೆಯುವ, ದೇಶ ವಿಭಜಿಸುವ, ಕೋಮು ಸಂಘರ್ಷಕ್ಕೆ ಪ್ರಚೋಧಿಸುವ ಭಾಷಣಗಳನ್ನು ಮಾಡಬಾರದು ಎಂದು ಚುನಾವಣಾ ಆಯೋಗ ಎಚ್ಚರಿಕೆ
ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ದೇಶದಲ್ಲಿ ಲೋಕಸಭಾ ಚುನಾವಣೆ ಈಗ ಅಂತಿಮ ಘಟ್ಟದಲ್ಲಿದೆ. ಈಗಾಗಲೇ ಶೇ.90ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆಗೆಲ್ಲ ಸುಮ್ಮನ್ನಿದ್ದ ಚುನಾವಣಾ ಆಯೋಗ ಚುನಾವಣೆಯ ಕೊನೆಯ ಹಂತದಲ್ಲಿ ಎಚ್ಚರಿಕೆ ನೀಡಿದರೆ ಇದರಿಂದಾಗುವ ಉಪಯೋಗವಾದರೂ ಏನು? ಇಷ್ಟು ದಿನಗಳ ಕಾಲ ದೇಶದಲ್ಲಿ ರಾಜಕೀಯ ಮುಖಂಡರು ಕೋಮು ಪ್ರಚೋಧಿತ ಭಾಷಣಗಳನ್ನು, ದೇಶ ವಿಭಜಿಸುವ, ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಮಾತುಗಳನ್ನಾಡಿದ್ದಾರೆ. ಇದನ್ನೆಲ್ಲ ಕೇಳಿಯೂ ಸುಮ್ಮನ್ನಿದ್ದ ಚುನಾವಣಾ ಆಯೋಗ ಈಗ ರಾಜಕೀಯ ಪಕ್ಷಗಳಿಗೆ ಉಪದೇಶ ಮಾಡುವುದರಲ್ಲಿ ಅರ್ಥವಿಲ್ಲ. ಚುನಾವಣೆಗೂ ಮುನ್ನವೇ ಈ ರೀತಿಯ ಎಚ್ಚರಿಕೆಯನ್ನು ನೀಡಿ, ನಿಯಮಬಾಹಿರವಾಗಿ ಚುನಾವಣಾ ಪ್ರಚಾರ ಮಾಡುವವರ ಹಾಗೂ ಪ್ರಚೋಧಿತ ಭಾಷಣಗಳನ್ನು ಮಾಡುವವರ ವಿರುದ್ಧ ಕ್ರಮತೆಗೆದುಕೊಂಡಿದ್ದರೆ ಚುನಾವಣಾ ಆಯೋಗದ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸುತ್ತಿದ್ದರು. ಆದರೆ ಚುನಾವಣೆಯ ಕೊನೆಯ ಘಟ್ಟದಲ್ಲಿ ನೆಪ ಮಾತ್ರಕ್ಕೆ ಆದೇಶಿಸಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.