Mysore
26
light rain

Social Media

ಬುಧವಾರ, 13 ನವೆಂಬರ್ 2024
Light
Dark

ಓದುಗರ ಪತ್ರ: ಕಲಾಮಂದಿರವೇನು ಧಾರ್ಮಿಕ ಸ್ಥಳವೇ?

ಕಳೆದ ಗುರುವಾರ ದಸರಾ ಸಾಂಸ್ಕೃತಿಕ ಉಪಸಮಿತಿಯ ಅಧಿಕಾರೇತರ ಸದಸ್ಯರನ್ನು ಅಭಿನಂದಿಸಲು ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭೋಜನಕ್ಕೆ ಮಾಂಸಾಹಾರವನ್ನು ಉಣಬಡಿಸಿರುವುದಾಗಿ ವರದಿಯಾಗಿದ್ದು, ಇದಕ್ಕೆ ಕೆಲವರಿಂದ ಆಕ್ಷೇಪಗಳೂ ಕೇಳಿಬರುತ್ತಿವೆ.

ಕಲಾಮಂದಿರ ಸಭಾಂಗಣದ ಒಳಾವರಣದಲ್ಲಿ ಯಾವುದೇ ರೀತಿಯ ಭೋಜನ ಅಥವಾ ಆಹಾರ ನೀಡುವ ವ್ಯವಸ್ಥೆಯ ವಿರುದ್ಧ ಹಿಂದೆಯೂ ಆಕ್ಷೇಪ ವ್ಯಕ್ತವಾಗಿತ್ತು. ಶುಚಿತ್ವದ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ಒಳಾವರಣದ ಬದಲಿಗೆ ಹೊರ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲು ಸೂಚಿಸಲಾಗಿತ್ತು. ಕಲಾಮಂದಿರ ರಾಜ್ಯದ ಸಂಸ್ಕೃತಿ ಇಲಾಖೆಗೆ ಸೇರಿದ್ದು, ಇದು ಈಗಾಗಲೇ ಮೂರೂ ದಿಕ್ಕುಗಳಿಂದ ಈ ಸಂಪ್ರದಾಯವಾದಿಗಳ ದಾಳಿಯಿಂದ
ಸಂಕುಚಿತವಾಗಿರುವ ‘ಸಂಸ್ಕೃತಿ’ ಎಂಬ ಪದವನ್ನು ಇಲ್ಲಿಗೂ ವಿಸ್ತರಿಸಿ, ಈ ಆವರಣದಲ್ಲಿ, ಎಲ್ಲ ಸಮುದಾಯದವರೂ ಬಂದು ಹೋಗುವುದರಿಂದ ಮಾಂಸಾಹಾರ ಒದಗಿಸುವುದು ಸೂಕ್ತವಲ್ಲ ಎಂದು ಹೇಳುವುದು, ಬಹು ಸಂಸ್ಕೃತಿಗೆ ವಿರುದ್ಧವಾಗಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಿಗೆ ಎಲ್ಲ ಸಮುದಾಯದವರು ಬರುವುದರಿಂದಲೇ ರುಚಿಸುವ ಆಹಾರ ನೀಡುವ ವಿಶಾಲ ಮನೋಭಾವ ನಮ್ಮೊಳಗಿರಬೇಕಲ್ಲವೇ? ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಸಹಭೋಜನ’ದ ಕರೆ ಕೇವಲ ಒಟ್ಟಿಗೆ ಕುಳಿತು ಊಟ ಮಾಡುವುದಕ್ಕೆ ಸೀಮಿತವಾಗಿರುವುದಲ್ಲ. ಅದರ ಹಿಂದೆ ಎಲ್ಲ ವಿಧದ ಆಹಾರಗಳನ್ನೂ ಒಟ್ಟಿಗೆ ಕುಳಿತು ಸೇವಿಸುವ ಒಂದು ವಿಶಾಲ ಚಿಂತನ ಇದೆ.

ಇಷ್ಟಕ್ಕೂ ಕಲಾಮಂದಿರದಲ್ಲಿ ಮಾಂಸಾಹಾರ ನೀಡುವುದರಿಂದ ಯಾವ/ಯಾರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ? ಸಸ್ಯಾಹಾರವನ್ನಷ್ಟೇ ನೀಡಬೇಕು ಎಂದು ಶಾಸನ ವಿಧಿಸಲು ಅದೇನು ಧಾರ್ಮಿಕ ಕ್ಷೇತ್ರವೇ? ಅದು ನಾಡಿನ ಸಾಂಸ್ಕೃತಿಕ ವೈವಿಧ್ಯತೆಗೆ ಬೌದ್ಧಿಕ ನೆಲೆ ಒದಗಿಸುವ ಒಂದು ಜಾಗ. ಅಲ್ಲಿ ಬಹುಸಂಸ್ಕೃತಿಯ ಚಿಂತನೆಗಳು ಮೊಳೆಯಬೇಕೇ ಹೊರತು ಸಮಾಜವನ್ನು ಹಿಂದಕ್ಕೆ ಎಳೆದೊಯ್ಯುವ ಮನಸ್ಥಿತಿಯನ್ನು ಸೃಷ್ಟಿಸುವಂತಾಗಬಾರದು.
-ನಾ.ದಿವಾಕರ, ಮೈಸೂರು.

 

Tags: