ಮೈಸೂರಿನಲ್ಲಿ ೪೦ಕ್ಕೂ ಹೆಚ್ಚು ಮರಗಳ ಹನನ ನಡೆದಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಧರೆಗೆ ಉರುಳಿಸುವ ಮೂಲಕ ಜಗತಿಕ ತಾಪಮಾನಕ್ಕೆ ಮೈಸೂರು ಪಾಲಿಕೆ ಕೊಡುಗೆ ನೀಡಿದೆ. ಸಾರ್ವಜನಿಕರು ರಸ್ತೆಬದಿಯಲ್ಲಿ ಒಣಗಿ ನಿಂತ ಮರಗಳ ಬಗ್ಗೆ ದೂರು ನೀಡಿದರೆ, ಅದಕ್ಕೆ ನೂರೆಂಟು ನಿಯಮಗಳನ್ನು ಹೇಳುವ ನಗರಪಾಲಿಕೆ ಮತ್ತು ಅರಣ್ಯ ಇಲಾಖೆ ಒಟ್ಟಾಗಿಯೇ ೪೦ಕ್ಕೂ ಹೆಚ್ಚು ಬೃಹತ್ ಮರಗಳ ಬುಡಕ್ಕೆ ಕೊಡಲಿ ಹಾಕಿರುವುದು ವಿಪರ್ಯಾಸ.
ರಸ್ತೆ ಅಗಲೀಕರಣಕ್ಕೆ ಪೂರಕವಾಗಿ ಮರಗಳನ್ನು ಕಡಿದಿರುವುದು ನಿಜವಾದರೆ, ಏಕೆ ಸಾರ್ವಜನಿಕರ ಗಮನಕ್ಕೆ ತರಲಿಲ್ಲ. ಪರಿಸರವಾದಿಗಳು, ತಜ್ಞರಿಗೆ ಯಾರಿಗೂ ವಿಷಯ ತಿಳಿಸದೆ ದಿಢೀರ್ ಇಂತಹ ಕ್ರಮ ಕೈಗೊಂಡಿರುವುದು ಹಲವಾರು ಅನುಮಾನಗಳಿಗೆ ಆಸ್ಪದೆ ನೀಡಿದೆ. ಒಂದು ಮರ ಕಡಿದರೆ, ಅದಕ್ಕೆ ಪರ್ಯಾಯವಾಗಿ ೧೦ ಸಸಿಗಳನ್ನು ನೆಡಬೇಕು ಎಂಬ ನಿಯಮ ಇದೆ ಎನ್ನಲಾಗಿದೆ. ಹಾಗಿದ್ದರೆ ನಗರ ಪಾಲಿಕೆ ಮತ್ತು ಅರಣ್ಯಾಧಿಕಾರಿಗಳು ಅಂದಾಜು ೪೦೦ ಸಸಿಗಳನ್ನು ನೆಟ್ಟು ಪೋಷಣೆ ಮಾಡಿರಬೇಕು. ಅವು ಎಲ್ಲಿವೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇಲ್ಲವಾದರೆ, ಈ ಮರಗಳ ಹನನ ಪ್ರಕರಣ ‘ಬೆಕ್ಕು ಕಣ್ಣುಮುಚ್ಚಿ ಕೊಂಡು ಹಾಲು ಕುಡಿದಂತೆ’ ಎಂಬ ಮಾತನ್ನು ಸಾಬೀತುಪಡಿಸುತ್ತದೆ.
-ಎಸ್.ವಿಶ್ವಜಿತ್, ಕುವೆಂಪುನಗರ, ಮೈಸೂರು.