ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಹೊರ ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಚಾಮರಾಜನಗರ ಜಿಲ್ಲೆಯಲ್ಲಿಯೇ ಒಂದು ಸುಸಜ್ಜಿತ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಲಾಯಿತು.
‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿಯನ್ನು ತೊಡೆದುಹಾಕಿ ಅಭಿವೃದ್ಧಿಯತ್ತ ಸಾಗುತ್ತಿರುವ ಚಾ.ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಸ್ನಾತಕೋತ್ತರ ಕೇಂದ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನೂರಾರು ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿಯೇ ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಕ್ಯಾಂಪಸ್‌ನಲ್ಲಿ ಆರೋಗ್ಯ ಕೇಂದ್ರ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳಾದಾಗ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ. ಕ್ಯಾಂಪಸ್ ಸಮೀಪ ದಲ್ಲಿಯೇ ಮರಿಯಾಲದ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆಯಾದರೂ, ಅಲ್ಲಿ ಕೆಲ ಬಾರಿ ವೈದ್ಯರೇ ಇರುವುದಿಲ್ಲ.
ಅಲ್ಲದೆ ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಆರ್ಥಿಕವಾಗಿಯೂ ಶಕ್ತರಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗೆ ಗಮನಹರಿಸಿ ಸ್ನಾತಕೋತ್ತರ ಕೇಂದ್ರದೊಳಗೆಯೇ ಒಂದು ಆಸ್ಪತ್ರೆ ನಿರ್ಮಿಸಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.