ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ದರ ಹೆಚ್ಚಳ ಮಾಡಿರುವ ಸರ್ಕಾರ ಶೇ. ೨೩ ರಷ್ಟು ಕೆಎಸ್ಆರ್ ಟಿ ಸಿ ಬಸ್ ಟಿಕೆಟ್ ದರ ಮತ್ತು ಶೇ. ೩೦ ರಿಂದ ೩೩ರಷ್ಟು ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ.
ಇದನ್ನು ಗಮನಿಸಿದಾಗ ರಾಜ್ಯದಲ್ಲಿ ವಿರೋಧ ಪಕ್ಷದ ವೈಫಲ್ಯವೇ? ಅಥವಾ ಆಡಳಿತ ಪಕ್ಷದ ನಡೆ ಸರಿಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರ ದರ ಏರಿಕೆ ಮಾಡುವಾಗ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ತಜ್ಞರ ವರದಿಯೊಂದೇ ಆಧಾರವಾದರೆ ಜನರ ಸಂಕಟವನ್ನು ಕೇಳುವವರು ಯಾರು?
ಬೆಲೆ ಅಥವಾ ದರ ಹೆಚ್ಚಿಸಲು ‘ಅವಕಾಶ’ ಇರುವವರೆಲ್ಲರೂ ಸಂದರ್ಭಕ್ಕೆ ಅನುಗುಣವಾಗಿ ಬೆಲೆಗಳನ್ನು ಏರಿಸುತ್ತಾರೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರು, ದಿನಗೂಲಿ ನೌಕರರು ತಮ್ಮ ಆದಾಯ ಹೆಚ್ಚಳ ಶೇಕಡಾವಾರು ಹೇಗಿರುತ್ತದೆ ಎನ್ನುವುದು ಅವರವರಿಗಷ್ಟೇ ತಿಳಿದಿರುತ್ತದೆ. ಹಾಗಾಗಿಯೇ ಯಾವುದೇ ದರ ಒಂದು ಮಿತಿಗಿಂತ ಏರಿದಾಗ ಆಕ್ರೋಶ ವ್ಯಕ್ತವಾಗುತ್ತದೆ.
ಜನರ ಕಲ್ಯಾಣ ಧ್ಯೇಯವನ್ನೇ ಗುರಿಯಾಗಿಟ್ಟು ಕೊಂಡಿರುವ ಸರ್ಕಾರ ಮೊದಲು ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ದರ ಹೆಚ್ಚಳಕ್ಕೆ ಮುಂದಾದರೆ ಅದು ಜನಪರ ಸರ್ಕಾರವೆನಿಸುತ್ತದೆ.
ನಾಗೇಶ್, ಮಾನಸಗಂಗೋತ್ರಿ, ಮೈಸೂರು





