ಈಗಿರುವ ಅಂಚೆ ಕಚೇರಿಗಳ ವಿನ್ಯಾಸ ಬದಲಿಸಿ, ಅವುಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ನಾಗರಿಕರ ಅಗತ್ಯ ಬೇಡಿಕೆಗಳನ್ನು ಪೂರೈಸುವ ಉಡುಪು, ಔಷಧ ಆಹಾರ ಪದಾರ್ಥಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳೂ ಸೇರಿದಂತೆ ಗ್ರಾಹಕರು ಬಯಸುವ ಉತ್ಪನ್ನಗಳನ್ನು ಒದಗಿಸುವ ನಗರಗಳಲ್ಲಿರುವ ಬೃಹತ್ ಮಾಲ್‌ಗಳಂತೆ ಅಂಚೆ ಕಚೇರಿಗಳನ್ನು ಸಣ್ಣ ಮಾಲ್’ಗಳಾಗಿ ಪರಿವರ್ತಿಸಿ ಲಾಭದಾಯಕ ಸಂಸ್ಥೆಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ.ಸಿಂದಿಯಾ ಅವರು ಬೆಂಗಳೂರಿನಲ್ಲಿ ನಡೆದ ಅಂಚೆ ಇಲಾಖೆ ಸಮಾರಂಭದಲ್ಲಿ ಹೇಳಿದ್ದಾರೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆಯೂ ಹಣಕಾಸಿನ ಸಮಸ್ಯೆ ಎದುರಿಸುತ್ತಿರಬಹುದು ಎನಿಸುತ್ತದೆ, ಖಾಸಗಿ ಕೊರಿಯರ್ ಸೇವೆಗಳು ಬಂದ ನಂತರ ಅಂಚೆ ಇಲಾಖೆಗೆ ದೊಡ್ಡ ಹೊಡೆತ ಬಿದ್ದಿರಬಹುದು. ಖಾಸಗಿ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಿಎಸ್‌ಎನ್‌ಎಲ್ ಇಂದು ಮುಚ್ಚುವ ಹಂತದಲ್ಲಿದೆ. ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಎಲ್ಲ ಇಲಾಖೆಗಳ ಕತ್ತು ಹಿಸುಕುವ ಕೆಲಸಮಾಡುತ್ತಿದೆ. ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರವಿದು. ಅಂಚೆ ಕಚೇರಿಗಳು ಈಗಿರುವಂತೆ ಅಂಚೆ ಕಚೇರಿಗಳಾಗಿಯೇ ಕಾರ್ಯ ನಿರ್ವಹಿಸಲಿ.
– ಬೂಕನಕೆರೆ ವಿಜೇಂದ್ರ , ಕುವೆಂಪುನಗರ, ಮೈಸೂರು



