Mysore
27
broken clouds

Social Media

ಗುರುವಾರ, 07 ನವೆಂಬರ್ 2024
Light
Dark

ಓದುಗರ ಪತ್ರ: ಸಾಹಿತ್ಯ ಕ್ಷೇತ್ರದವರೇ ಸಮ್ಮೇಳನಾಧ್ಯಕ್ಷರಾಗಲಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್.20ರಿಂದ 23ರವರೆಗೆ ಮಂಡ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತ್ಯ ಕ್ಷೇತ್ರದ ಹೊರತಾಗಿ ಭಿನ್ನ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ.

ಇಲ್ಲಿಯವರೆಗೂ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡುತ್ತಾ ಬರಲಾಗಿದೆ. ಆದರೆ ಈ ಬಾರಿ ಸಾಹಿತ್ಯೇತರ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಬೇಕು ಎನ್ನುವವರ ಉದ್ದೇಶವೇನು ಎಂಬುದೇ ತಿಳಿಯದಾಗಿದೆ.

ಸಾಹಿತ್ಯೇತರ ಕ್ಷೇತ್ರದ ಸಾಧಕರನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡುವುದರಿಂದ ಸಾಹಿತ್ಯ ಕ್ಷೇತ್ರವನ್ನು ಅಪವಿತ್ರಗೊಳಿಸುವ ಜತೆಗೆ ಭಿನ್ನ ಕ್ಷೇತ್ರದ ಸಾಧಕರನ್ನು ಕನ್ನಡದ ತೇರಿನಲ್ಲಿ ಕೂರಿಸಿ ಎಳೆಯುವುದು ಕೆಟ್ಟ ಪರಂಪರೆಗೆ ದಾರಿ ಮಾಡಿಕೊಡಬಹುದು.

ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತ್ಯೇತರ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಬೇಕು ಎಂಬ ವಿಚಾರವನ್ನು ಮೊದಲು ಪ್ರಸ್ತಾಪಿಸಿದ್ದು ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಯವರು. ಇಂತಹ ಬೆಳವಣಿಗೆಗಳು ಮುಂದೊಂದು ದಿನ ಸಾಹಿತ್ಯ ಕ್ಷೇತ್ರದಲ್ಲಿಯೂ ರಾಜಕೀಯ ತಂತ್ರಗಾರಿಕೆಗಳು ಚುರುಕಾಗಲು ಕಾರಣವಾಗಬಹುದು.

ಮಹೇಶ್‌ ಜೋಶಿಯವರು ಮೊದಲು ಕನ್ನಡ ಸಾಹಿತ್ಯ ಸಮ್ಮೇಳನಗಳ ಧೈಯೋದ್ದೇಶಗಳೇನು ಎಂಬುದನ್ನು ತಿಳಿದುಕೊಳ್ಳಲಿ, ಸಾಹಿತ್ಯೇತರ ಕ್ಷೇತ್ರದ ಸಾಧಕರು ಕನ್ನಡ ಸಾಹಿತಿ ಸಮ್ಮೇಳನಗಳ ಅಧ್ಯಕ್ಷರಾದರೆ ಅದನ್ನು ಸಾಹಿತ್ಯ ಸಮ್ಮೇಳನ ಎನ್ನಲು ಸಾಧ್ಯವೇ? ಕಸಾಪ ಈ ಬಗ್ಗೆ ಚಿಂತಿಸಿ ಸಾಹಿತ್ಯ ಕ್ಷೇತ್ರದ ಸಾಧಕರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags: