ರಾಗಿಮುದ್ದೆ ಕರ್ನಾಟಕದ ಸಾಂಪ್ರದಾಯಿಕ ಆಹಾರ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಗಿಮುದ್ದೆ ರಾಷ್ಟ್ರಮಟ್ಟದಲ್ಲಿ ಪರಿಚಯಗೊಂಡಿತ್ತು. ಆದರೂ ಅದರ ಬಳಕೆ ವ್ಯಾಪಕವಾಗಿರಲಿಲ್ಲ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ರಾಗಿಮುದ್ದೆಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಈಟ್ ರೈಟ್ ಇಂಡಿಯಾ ಅಭಿಯಾನದಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ರಾಗಿಮುದ್ದೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುತ್ತಿರುವುದು ಮೆಚ್ಚುವಂಥದ್ದು. ಅದರ ತಯಾರಿಕೆಯ ವಿಧಾನವನ್ನೂ ಜನರಿಗೆ ತಿಳಿಸಿರುವುದು ಸಂತೋಷದ ಸಂಗತಿ.
ರಾಗಿ ಪೌಷ್ಟಿಕಾಂಶಯುಕ್ತ ಆಹಾರ. ಅದರಲ್ಲಿ ನಾರು ಮತ್ತು ಕಬ್ಬಿಣದ ಅಂಶಗಳಿವೆ. ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕರ ಆಹಾರ ಪದ್ಧತಿಗೆ ಉತ್ತೇಜನ ಸಿಗುತ್ತದೆ. ಪ್ರತಿಯೊಬ್ಬರ ಆರೋಗ್ಯ ಮತ್ತು ಆಹಾರದ ಅಗತ್ಯಗಳು ಭಿನ್ನವಾಗಿರುವುದರಿಂದ, ಸಮತೋಲಿತ ಆಹಾರದ ಭಾಗವಾಗಿ ರಾಗಿಯನ್ನು ಸೇವಿಸುವುದು ಉತ್ತಮ. ಈ ಅಭಿಯಾನದ ಮೂಲಕ ಕರ್ನಾಟಕದ ಜನರಷ್ಟೇ ಅಲ್ಲದೆ, ಇತರ ರಾಜ್ಯಗಳ ಜನರಿಗೂ ರಾಗಿಮುದ್ದೆಯ ಪರಿಚಯವಾಗಲಿದೆ. ರಾಗಿಗೆ ಬೇಡಿಕೆ ಹೆಚ್ಚಾದರೆ, ಅದನ್ನು ಬೆಳೆಯುವ ರೈತರಿಗೆ ಉತ್ತಮ ಮಾರುಕಟ್ಟೆ ದೊರೆಯಬಹುದು. ಇದರಿಂದ ರೈತರ ಆದಾಯವೂ ಹೆಚ್ಚುವ ನಿರೀಕ್ಷೆಯಿದೆ. ಸ್ಥಳೀಯ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಜನಪ್ರಿಯ ಗೊಳಿಸುವಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು.
-ಬಿ. ಗಣೇಶ್, ಮೈಸೂರು


