ಮೈಸೂರು ಮಹಾನಗರ ಪಾಲಿಕೆಯವರು ಕೋಟ್ಯಂತರ ರೂ. ವ್ಯಯಿಸಿ ನಗರದ ವಿವಿಧ ಭಾಗಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದು, ನಿರ್ವಹಣೆಯ ಕೊರತೆಯಿಂದಾಗಿ ಕೆಲವು ತಂಗುದಾಣಗಳು ಪ್ರಯಾಣಿಕರ ಉಪಯೋಗದಿಂದ ದೂರಾಗಿದೆ.
ನಗರದ ಟಿ.ಕೆ.ಲೇಔಟ್‌ನ ಜಂಕ್ಷನ್ ಬಳಿ ಇರುವ ಬಸ್ ತಂಗುದಾಣದಲ್ಲಿ ಅನಾರೋಗ್ಯ ಪೀಡಿತರು, ನಿರ್ಗತಿಕರು ವಾಸ್ತವ್ಯ ಹೂಡಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಸ್ ತಂಗುದಾಣದ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಕೆಲವರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ತಂಗುದಾಣದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ದುರ್ವಾಸನೆ ಬೀರುತ್ತಿದೆ. ತಂಗುದಾಣವನ್ನು ಸಂಪೂರ್ಣವಾಗಿ ನಿರ್ಗತಿಕರೇ ಆಕ್ರಮಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ತಂಗುದಾಣದ ಒಳಗೆ ಹೋಗಲಾಗದೆ ಹೊರಗೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ. ಆದ್ದರಿಂದ ಕೂಡಲೇ ಮಹಾನಗರ ಪಾಲಿಕೆಯವರು ಅಲ್ಲಿರುವ ನಿರ್ಗತಿಕರಿಗೆ ಬೇರೆಡೆ ಸೂಕ್ತ ಆಶ್ರಯ ನೀಡಿ ಬಸ್ ತಂಗುದಾಣದಲ್ಲಿ ಸ್ವಚ್ಛತೆ ಕಾಪಾಡಬೇಕಿದೆ.
-ರಾಜು.ಸಿ ಮುತ್ತು, ಬಿ.ಗುಂಡಾಪುರ, ಕೊಳ್ಳೇಗಾಲ ತಾ.