Mysore
25
overcast clouds
Light
Dark

ಓದುಗರ ಪತ್ರ: ಚಾ.ಬೆಟ್ಟದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ತಮ್ಮ ಪಾದರಕ್ಷೆಗಳನ್ನು ಚಪ್ಪಲಿ ಸ್ಟಾಂಡಿನಲ್ಲಿಯೇ ಬಿಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಯಾವುದೇ ಅಂಗಡಿ ಮುಂಗಟ್ಟುಗಳ
ಮುಂದೆ ಬಿಡಬಾರದು ಎಂದು ಸೂಚಿಸಲಾಗಿದೆ. ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಇದೊಂದು ಸ್ವಾಗತಾರ್ಹ ಕ್ರಮ. ಆದರೆ ನಾವು ಚಪ್ಪಲಿಗಳನ್ನು ಈ ಸ್ಟಾಂಡಿನಲ್ಲಿ ಬಿಡಬೇಕಾದರೆ ಅವುಗಳನ್ನು ಕೈಯಲ್ಲಿ ಎತ್ತಿ ಇಡಬೇಕು. ಆದರೆ ಇಲ್ಲಿ ಚಪ್ಪಲಿ ಮುಟ್ಟಿದ ಕೈಗಳನ್ನು ತೊಳೆದುಕೊಳ್ಳಲು ನೀರಿನ ವ್ಯವಸ್ಥೆಯೇ ಇಲ್ಲ. ಇನ್ನು ದೇವಾಲಯದ ಟಿಕೆಟ್ ಕೌಂಟರ್ ಬಳಿ ಇರುವ ನೀರಿನ ಘಟಕದಲ್ಲಿಯೂ ನೀರಿನ ಸೌಲಭ್ಯವಿಲ್ಲದೆ ಭಕ್ತರು ಕೈಗಳನ್ನು ತೊಳೆದುಕೊಳ್ಳಲು ಪರದಾಡುವಂತಾಗಿದೆ. ಚಪ್ಪಲಿ ಸ್ಟ್ಯಾಂಡಿನವರ ಬಳಿ ನೀರಿನ ವ್ಯವಸ್ಥೆಯ ಬಗ್ಗೆ ಕೇಳಿದರೆ ಅವರು ದೇವಾಲಯದ ಆಡಳಿತ ಮಂಡಳಿಯವರನ್ನು ಕೇಳಿ ಎನ್ನುತ್ತಾರೆ. ಇನ್ನು ಈ ಬಗ್ಗೆ ದೂರು ನೀಡಲು ದೇವಾಲಯದ ಸಹಾಯವಾಣಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸುವುದಿಲ್ಲ. ಇದರಿಂದಾಗಿ ಭಕ್ತರಿಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ಚಪ್ಪಲಿ ಸ್ಟ್ಯಾಂಡಿನ ಬಳಿ ಕೈ-ಕಾಲುಗಳನ್ನು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.

-ಶಿವಮೊಗ್ಗ ನಾ.ದಿನೇಶ್ ಅಡಿಗ, ಮೈಸೂರು.