Mysore
26
overcast clouds
Light
Dark

ಓದುಗರ ಪತ್ರ: ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಪ್ರಧಾನಿ ರದ್ದುಪಡಿಸಲಿ

narendra modi and prajwal revanna

ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ತನ್ನ ಪಾತ್ರದ ಅಗತ್ಯವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿ ಅನಿಸುತ್ತಿಲ್ಲ.

ಪ್ರಜ್ವಲ್ ಅವರನ್ನು ದೇಶಕ್ಕೆ ವಾಪಸ್ ಕರೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಕಾರ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದು ಸರಿಯಷ್ಟೆ. ಪ್ರಜ್ವಲ್
ಅವರಿಗೆ ಕೇಂದ್ರವು ನೀಡಿರುವ ರಾಜತಾಂತ್ರಿಕ (ಡಿಪ್ಲೊಮ್ಯಾಟಿಕ್) ಪಾಸ್ ಪೋರ್ಟ್‌ ಅನ್ನು ರದ್ದುಪಡಿಸಿದರೆ, ಆತ ಭಾರತಕ್ಕೆ ಮರಳುವುದು ಅನಿವಾರ್ಯವಾಗುತ್ತದೆ.

ಆದರೆ, ಪ್ರಧಾನಿ ಮೋದಿ ಅವರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದೆ, ಪ್ರಜ್ವಲ್ ಪ್ರಕರಣ ಕೇವಲ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಎಂಬಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ.
ನರೇಂದ್ರ ಮೋದಿ ಅವರಿಗೆ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವ ಬದಲು ಮೃಗೀಯ ವ್ಯಕ್ತಿತ್ವದ ಪ್ರಜ್ವಲ್ ಅವರನ್ನು ರಕ್ಷಿಸಿ, ಬಿಜೆಪಿ- ಜಾತ್ಯತೀತ ಜನತಾದಳದ ಮೈತ್ರಿಯನ್ನು ಉಳಿಸಿಕೊಳ್ಳುವುದೇ ಮುಖ್ಯವಾದಂತಿದೆ.

‘ಬೇಟಿ ಬಚಾವೋ… ಬೇಟಿ ಪಡಾವೋ’, ಮಹಿಳಾ ಸಬಲೀಕರಣ… ಇತ್ಯಾದಿ ಸ್ತ್ರೀಯರ ರಕ್ಷಣೆ, ಪಾಲನೆ, ಪೋಷಣೆ ಬಗ್ಗೆ ವರ್ಣರಂಜಿತ ಮಾತುಗಳನ್ನಾಡುತ್ತಿರುವ ಕೇಂದ್ರ ಸರ್ಕಾರದ ನಾಯಕರು, ಪ್ರಜ್ವಲ್ ಪ್ರಕರಣದಲ್ಲಿ ಅತ್ಯಂತ ನಿರ್ಲಕ್ಷ್ಯ ತೋರಿಸುತ್ತಿರುವುದು ನಾಚಿಕೆಗೇಡು, ಸುಖಾಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಪ್ರಜ್ವಲ್‌ನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಮೋದಿ ಅವರು ಮುಂದಾಗಬೇಕು. ಆ ಮೂಲಕ ಆರೋಪಿಯ ಬಂಧನಕ್ಕೆ ಇರುವ ತೊಡಕನ್ನು ನಿವಾರಿಸಬೇಕು.

-ಆರ್.ವಿ.ಮಂಜುಪ್ರಸಾದ್, ಸರಸ್ವತಿಪುರಂ, ಮೈಸೂರು.