ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನೀಡಿದಷ್ಟು ಮನ್ನಣೆಯನ್ನು ಟಿಪ್ಪು ಸುಲ್ತಾನ್ ಹಾಗೂ ಮಿರ್ಜಾ ಇಸ್ಮಾಯಿಲ್ ಅವರಿಗೆ ನೀಡಿಲ್ಲ ಎಂದು ಮೈಸೂರು ಸಾಹಿತ್ಯ ಸಂಭ್ರಮದ ೯ನೇ ಆವೃತ್ತಿ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿರುವುದು ಸರಿಯಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕನ್ನಡಿಗರಾದ ನಾವು ‘ಕೃಷ್ಣರಾಜ ಭೂಪ ಮನೆ ಮನೆ ದೀಪ’ ಹಾಗೂ ‘ಆಡು ಮುಟ್ಟದ ಸೊಪ್ಪಿಲ್ಲ , ಕೃಷ್ಣರಾಜ ಒಡೆಯರ್ ಮಾಡದ ಕೆಲಸವಿಲ್ಲ’ ಎಂಬ ಮಾತುಗಳನ್ನು ಆಗಿಂದಾಗ್ಗೆ ಕೇಳುತ್ತಾ ಇರುತ್ತೇವೆ.
ಈ ಮಾತುಗಳೇ ಅವರ ಸಾಧನೆಯನ್ನು ತಿಳಿಸುತ್ತವೆ. ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಾಜರ್ಷಿ ಎಂದು ಕರೆದಿರುವುದು ಮಣಿಶಂಕರ್ ಅಯ್ಯರ್ ಅವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ನಾಲ್ವಡಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಣಿ ಶಂಕರ್ ಅಯ್ಯರ್ ಅವರಿಗೆ ಮಾಹಿತಿ ಕೊರತೆ ಇರಬಹುದು. ಟಿಪ್ಪು ಸುಲ್ತಾನ್ ಹಾಗೂ ಮಿರ್ಜಾ ಇಸ್ಮಾಯಿಲ್ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಕನ್ನಡಿಗರು ಇಂದಿಗೂ ಸ್ಮರಿಸುತ್ತಾರೆ. ಈ ಬಗ್ಗೆ ಮಣಿ ಶಂಕರ್ ಅಯ್ಯರ್ ಅವರು ಅರಿಯುವುದು ಅಗತ್ಯ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.





