ಸರಗೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ದೇವಲಾಪುರ, ದೇವಲಾಪುರದ ಹುಂಡಿ, ಪುರದ ಶೆಡ್ಡು, ತೆಲುಗುಮಸಳ್ಳಿ, ಕಾಟವಾಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಆನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿವೆ.
ಈ ಗ್ರಾಮಗಳ ರೈತರು ಸಾಲ ಮಾಡಿ ಕೃಷಿ ಮಾಡುತ್ತಿದ್ದಾರೆ. ಅಲ್ಲದೆ ಹಗಲು ರಾತ್ರಿ ಎನ್ನದೆ ತಮ್ಮ ಜಮೀನುಗಳಲ್ಲಿ ಬೆಳೆದಿರುವ ರಾಗಿ, ಜೋಳ, ಶುಂಠಿ, ಬಾಳೆ, ಕಬ್ಬು ಮುಂತಾದ ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಾವಲು ಕಾಯುತ್ತಾರೆ. ಇಷ್ಟಿದ್ದರೂ ಬೆಳೆಗಳು ರೈತರ ಕೈ ಸೇರುತ್ತವೆ ಎಂಬ ಖಾತರಿ ಇಲ್ಲ. ಈ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆದ ಬೆಳೆಗಳು ಕೈ ಸೇರುವ ಮುನ್ನವೇ ಕಾಡಾನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಅಲ್ಲದೆ ಅನೇಕ ರೈತರು ಕಾಡಾನೆಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಪ್ರತಿ ಬಾರಿಯೂ ರೈತರಿಗೆ ಇದೇ ಸಮಸ್ಯೆ ಎದುರಾಗುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಭಾಗದ ಚುನಾಯಿತ ಪ್ರತಿನಿಧಿಗಳು, ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಜತೆಗೆ ಕಾಡಿನ ಸುತ್ತ ರೈಲ್ವೆ ಕಂಬಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕಿದೆ. ಇಲ್ಲದಿದ್ದರೆ ರೈತರ ಬದುಕು ದುಸ್ತರವಾಗಲಿದೆ.
-ಶಾಂತಮಲ್ಲಪ್ಪ, ದೇವಲಾಪುರದ ಹುಂಡಿ, ಸರಗೂರು ತಾ.