ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಸುರಕ್ಷತೆಯ ಕ್ರಮವೆನಿಸಿದರೂ ಇದರ ಹಿಂದೆ ಸಾವಿರಾರು ಬಡ ಯುವಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ ಅಡಗಿದೆ.
ರಾಜ್ಯದಲ್ಲಿರುವ ಸುಮಾರು ೬ ಲಕ್ಷ ಬೈಕ್ ಟ್ಯಾಕ್ಸಿಗಳು ಪ್ರತಿದಿನ ೫ ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಅಗ್ಗದ ಸೇವೆ ನೀಡುತ್ತಿವೆ. ಏಕಾಏಕಿ ಹಳದಿ ಬೋರ್ಡ್, ವಿಮೆ, ಎಫ್ಸಿ ಎಂದು ಕಠಿಣ ಷರತ್ತುಗಳನ್ನು ಹೇರಿದರೆ ಈ ವಾಹನಗಳ ಸಂಖ್ಯೆ ಸಾವಿರಗಳಿಗೆ ಕುಸಿಯಲಿದೆ.
ಇದು ಕೇವಲ ನಿರುದ್ಯೋಗ ಸೃಷ್ಟಿಸುವುದಷ್ಟೇ ಅಲ್ಲ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಆಟೋ ಮಾಫಿಯಾಗಳಿಗೆ ಪರೋಕ್ಷವಾಗಿ ನೆರವಾಗುವ ತಂತ್ರವಾಗಿದೆ. ಸರ್ಕಾರ ಅಗ್ರಿಗೇಟರ್‌ಗಳ ಮೇಲೆ ನಿಯಂತ್ರಣ ಹೇರಲಿ ಸವಾರರ ದಾಖಲೆಗಳನ್ನು ಡಿಜಿಟಲೀಕರಿಸಲಿ. ಆದರೆ ನಿಯಮಗಳ ಹೆಸರಿನಲ್ಲಿ ಬಡ ಸವಾರರ ಬದುಕನ್ನು ಬೀದಿಪಾಲು ಮಾಡುವುದು ಅಕ್ಷಮ್ಯ. ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿವೇಚನೆಯನ್ನು ಸರ್ಕಾರ ತೋರಲಿ.
-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು




