ಬಳ್ಳಾರಿಯಲ್ಲಿ ನಡೆಯಲಿರುವ ೮೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರವನ್ನೂ ಒದಗಿಸಿ ಆಹಾರ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂದು ಬಳ್ಳಾರಿಯ ದ್ರಾವಿಡ ಕನ್ನಡಿಗರ ಚಳವಳಿ ಸಂಘಟನೆ ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನಗಳು ‘ಮಾರಮ್ಮನ ಪರ’ ಅಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಭಾಷೆಯ ಅಳಿವು-ಉಳಿವು, ಕನ್ನಡ ಸಾಹಿತ್ಯ ಲೋಕಕ್ಕೆ ಸಂಬಂಧಿಸಿದಂತೆ ಚರ್ಚೆಗಳು, ಗೋಷ್ಠಿಗಳು ಕನ್ನಡದ ನೆಲ-ಜಲ ಸಂರಕ್ಷಣೆ ಯಲ್ಲಿ ಕನ್ನಡಿಗರ ಪಾತ್ರ, ಕನ್ನಡ ಪರ ಚಳವಳಿಗಳು, ನಶಿಸಿ ಹೋಗುತ್ತಿರುವ ಕನ್ನಡ ಶಾಲೆಗಳ ಉಳಿವು, ಇಂದು ರೈತರು ಅನುಭವಿಸುತ್ತಿರುವ ನೋವುಗಳು ಇವುಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿ ಇವುಗಳ ಪರಿಹಾರಕ್ಕಾಗಿ ಸರ್ಕಾರದ ಗಮನಕ್ಕೆ ತರುವುದು ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ. ಊಟ ಕೇವಲ ನೆಪ ಮಾತ್ರ ಆಗಬೇಕು. ಊಟಕ್ಕೆ ಪ್ರಾಧ್ಯಾನತೆ ಕೊಟ್ಟರೆ ಸಾಹಿತ್ಯ ಸಮ್ಮೇಳನಕ್ಕೆ ಯಾವ ಅರ್ಥವೂ ಇರುವುದಿಲ್ಲ, ಮಂಡ್ಯದಲ್ಲಿ ನಡೆದ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ಬಗ್ಗೆ ಪರ-ವಿರುದ್ಧ ಚರ್ಚೆಗಳು ನಡೆದವು, ಕಡೆಗೂ ಸಮ್ಮೇಳನದ ಕಡೆ ದಿನ ಮೊಟ್ಟೆ ನೀಡಲಾಯಿತು, ಕನ್ನಡ ಸಾಹಿತ್ಯ ಸಮ್ಮೇಳನಗಳು ಊಟದ ಜಾತ್ರೆಗಳಾಗಬಾರದು.
ಓದುಗರ ಪತ್ರ: ಸಾಹಿತ್ಯ ಸಮ್ಮೇಳನ ಊಟದ ಜಾತ್ರೆಗಳಾಗದಿರಲಿ





