ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿ ಹೆಚ್ಚಾಗಿದ್ದು, ಸಾಲಕ್ಕೆ ಹೆದರಿ ಜನರು ಮನೆಗಳನ್ನು ಬಿಟ್ಟು ಹೋಗಿರುವ ಪ್ರಕರಣಗಳು ವರದಿಯಾಗಿವೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಹೊಸ ಕಾನೂನು ರೂಪಿಸಲು ನಿರ್ಧರಿಸಲಾಗಿದ್ದು, ನಿಯಮ ಬಾಹಿರವಾಗಿ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮಜರುಗಿಸಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಅಲ್ಲದೆ ಸಂಜೆ ೫ರ ನಂತರ ಸಾಲ ವಸೂಲಾತಿಗೆ ಹೋಗುವಂತಿಲ್ಲ, ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಕಿರುಕುಳ ಎದುರಿಸುತ್ತಿದ್ದರೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಬೇಕೆಂದು ಹೇಳಿದ್ದಾರೆ.
ಆದರೆ ಗ್ರಾಮೀಣ ಭಾಗದ ಸಾಕಷ್ಟು ನಿರುದ್ಯೋಗಿ ಯುವಕರು ತಾತ್ಕಾಲಿಕ ಉದ್ಯೋಗಕ್ಕಾಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯ ಆದೇಶದಂತೆ ಅವರು ವಸೂಲಾತಿ ಮಾಡುತ್ತಾರೆ. ಹೀಗಿರುವಾಗ ಸರ್ಕಾರ ವಸೂಲಾತಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರೆ ಈ ಸಿಬ್ಬಂದಿಗಳು ಏನು ಮಾಡಬೇಕು? ವಸೂಲಾತಿಯಾಗದಿದ್ದಲ್ಲಿ ಕಂಪೆನಿಯ ಅಧಿಕಾರಿಗಳು ಒತ್ತಡ ಏರುತ್ತಾರೆ, ವಸೂಲಾತಿ ಮಾಡಲು ಹೋದರೆ ಜನರಿಂದ ಕಿರುಕುಳದ ಆರೋಪ ಎದುರಿಸಬೇಕಾಗಿದೆ. ಆದ್ದರಿಂದ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬದಲು ನಿಯಮ ಬಾಹಿರವಾಗಿ ವಸೂಲಿ ಮಾಡಿ ಎಂದು ಸೂಚಿಸುವ ಕಂಪೆನಿಗಳ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಲಿ.
-ಮೋಹನ್ ಕುಮಾರ್, ಎಚ್.ಡಿ.ಕೋಟೆ ತಾ