ರೈತರ ಹೆಸರನ್ನು ಮುಂದಿಟ್ಟುಕೊಂಡು ಸರ್ಕಾರ ಹಾಲಿನ ದರ ಹೆಚ್ಚಳದ ಘೋಷಣೆ ಮಾಡುತ್ತದೆ. ಆದರೆ ಆ ಘೋಷಣೆಯ ಪೂರ್ಣ ಲಾಭ ಮಾತ್ರ ಹಾಲು ಉತ್ಪಾದಿಸುವ ರೈತರ ಕೈಗೆ ತಲುಪುತ್ತಿಲ್ಲ ಎಂಬುದು ದುರಂತದ ಸಂಗತಿ.
ಹಗಲು-ರಾತ್ರಿ ಎನ್ನದೆ ಜಾನುವಾರುಗಳನ್ನು ಸಾಕಿ, ಮೇವು, ಪಶು ಆಹಾರ, ಔಷಧ ಹಾಗೂ ನಿರ್ವಹಣೆಯ ದುಬಾರಿ ವೆಚ್ಚವನ್ನು ಭರಿಸುವ ರೈತನಿಗೆ ಕೊನೆಗೆ ಸಿಗುತ್ತಿರುವುದು ಬಿಡಿಗಾಸು ಮಾತ್ರ ಎಂಬ ಕೊರಗು ಇದೆ. ಸರ್ಕಾರ ಘೋಷಿಸಿದ ದರ ಎಷ್ಟು? ರೈತನ ಖಾತೆಗೆ ಜಮೆಯಾಗುತ್ತಿರುವ ಹಣ ಎಷ್ಟು? ಎಂಬುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕು. ರೈತರ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸರ್ಕಾರಕ್ಕೆ ರೈತರ ಸಂಕಷ್ಟ ಕಾಣುತ್ತಿಲ್ಲವೇ? ಹಾಲಿನ ದರ ಹೆಚ್ಚಳ ಲಾಭ ಕೇವಲ ಕಾಗದದ ಮೇಲಿನ ಲೆಕ್ಕವಾಗಬಾರದು, ಅದು ರೈತನ ಜೇಬಿಗೆ ತಲುಪಬೇಕು. ಇಲ್ಲದಿದ್ದರೆ ಇದು ರೈತರ ಹೆಸರಿನಲ್ಲಿ ನಡೆಯುತ್ತಿರುವ ನಾಟಕ ಎನ್ನಬೇಕಾಗುತ್ತದೆ.
ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ



