ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ, ಜಾತ್ಯತೀತತೆ, ಏಕತೆ,ಸಮಗ್ರತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಒಳಗೊಂಡಿರುವ ನಮ್ಮ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ಕಲ್ಪಿಸಿಕೊಟ್ಟಿದೆ.
ಆದರೆ ಸಂವಿಧಾನ ಜಾರಿಗೆ ಬಂದು ೭೫ ವರ್ಷಗಳು ಕಳೆದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೂಡ ಸಾಮಾಜಿಕವಾಗಿ , ಆರ್ಥಿಕವಾಗಿ ಉಳ್ಳವರು, ಹಿಂದುಳಿದ ವರ್ಗದವರು, ಬಡವರು ಮತ್ತು ತಳ ಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.ಗೌಡಿಕೆ , ಪಟೇಲಿಕೆಯಂತಹ ಹಳೆಯ ಖಾಫ್ ಪಂಚಾಯಿತಿ ಹಳ್ಳಿಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಅವರು ತಮ್ಮ ಸ್ವಹಿತಾಸಕ್ತಿಗಾಗಿ ಊರಿನ ವ್ಯವಸ್ಥೆಯನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡು ಜನಸಾಮಾನ್ಯರನ್ನು ಶೋಷಣೆಗೊಳಪಡಿಸುವುದನ್ನು ಈಗಲೂ ಕೆಲವೂ ಕಡೆ ಕಾಣಬಹುದು. ಇಂತಹ ಬಲಾಢ್ಯರ ಶೋಷಣೆಯ ವಿರುದ್ಧ ಧ್ವನಿ ಎತ್ತಿದವರನ್ನು ಸಮಾಜದ ಮುಂದೆ ತಪ್ಪಿತಸ್ಥರಂತೆ ಬಿಂಬಿಸಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು ಈಗಲೂ ನಡೆದೇ ಇದೆ. ಆದ್ದರಿಂದ ಸಾಮಾಜಿಕ ಬಹಿಷ್ಕಾರದಂತಹ ದುಷ್ಕ ತ್ಯ ಎಸಗುವ ದುರುಳರನ್ನು ಶಿಕ್ಷೆಗೊಳಪಡಿಸುವ ಈ ಕಾನೂನು ದಮನಿತರು, ಶೋಷಿತರ ಬದುಕಿನ ಆಶಾಕಿರಣವಾಗಿದೆ.
– ಕೊತ್ತಲವಾಡಿ ಶಿವಕುಮಾರ್, ಚಾಮರಾಜನಗರ





