ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಮಂದಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಕರ್ನಾಟಕ ದಿಂದಲೂ ಅನೇಕ ಮಂದಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ.
ಸದ್ಯ ಈ ಮಹಾಕುಂಭಮೇಳದ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಅವಹೇಳನ ಕಾರಿಯಾಗಿ ಮಾತನಾಡುತ್ತಿದ್ದು, ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಕೊಳಚೆ ಯಾಗಿರುವ ಗಂಗೆಯಲ್ಲಿ ಸ್ನಾನ ಮಾಡಿದರೆ, ಪುಣ್ಯ ಬರುವುದಿಲ್ಲ, ರೋಗ ಬರುವುದು ಗ್ಯಾರಂಟಿ’ ಎಂದು ಲೇವಡಿ ಮಾಡಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ಮತ್ತು ಅಮಿತ್ ಶಾ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಅವರ ಪಾಪ ಕಳೆಯುವುದಿಲ್ಲ’ ಎಂದು ಟೀಕಿಸಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ. ಮಹದೇವಪ್ಪನವರಿಗೆ ಪತ್ರಕರ್ತರು ನೀವೂ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ‘ನಾನು ನಿತ್ಯ ಸ್ನಾನ ಮಾಡುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ಒಂದು ಪಕ್ಷವನ್ನು ಟೀಕಿಸುವ ಬದಲು ಒಂದು ಸಮುದಾಯದ ಧಾರ್ಮಿಕ ಆಚರಣೆಯನ್ನು ಟೀಕಿಸುವುದು ಎಷ್ಟು ಸರಿ? ಮತ್ತೊಬ್ಬರ ಧಾರ್ಮಿಕ ಆಚರಣೆಯನ್ನು ಅವಹೇಳನ ಮಾಡಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಈ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ಬೇಸರದ ಸಂಗತಿ. ಆದ್ದರಿಂದ ಜನಪ್ರತಿನಿಧಿಗಳು ಮುಂದಿನ ದಿನಗಳಲ್ಲಾದರೂ ಮತ್ತೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗದಂತೆ ಮಾತನಾಡುವುದನ್ನು ಕಲಿಯಲಿ.
-ರಾಜೇಶ್, ಎಚ್.ಡಿ.ಕೋಟೆ ತಾ.