Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಓದುಗರ ಪತ್ರ: ಜನರಿಗೆ ಮಾರಕವಾದ ಮಾಹಿತಿ ಫಲಕಗಳು

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಬಡಾವಣೆಗಳು ಹಾಗೂ ರಸ್ತೆಗಳ ಎಲ್ಲ ಕ್ರಾಸ್‌ಗಳಲ್ಲಿ ವಾರ್ಡ್ ಸಂಖ್ಯೆ, ಆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹಾಗೂ ಪಾಲಿಕೆ ಸದಸ್ಯರ ಮಾಹಿತಿಯ ಜೊತೆಗೆ ಪ್ರಮುಖ ರಸ್ತೆಯ ಹೆಸರು ಮತ್ತು ಕ್ರಾಸ್‌ಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಅಳವಡಿಸಲಾಗಿದೆ. ಇದು ನಾಗರಿಕರಿಗೆ ಆಯಾ ಪ್ರದೇಶಗಳ ಬಗ್ಗೆ ಮಾಹಿತಿ ಒದಗಿಸುವ ಉತ್ತಮ ಕೆಲಸವಾಗಿದೆ. ಆದರೆ ಈ ಮಾಹಿತಿ ಫಲಕಗಳು ಜನರಿಗೆ ಮಾರಕವಾಗಿ ಪರಿಣಮಿಸಿವೆ. ಈ ರೀತಿಯ ಮಾಹಿತಿ ಫಲಕಗಳನ್ನು ಅಳವಡಿಸಿರುವ ಸ್ಥಳಗಳಲ್ಲಿ ಸಂಚರಿಸುವ ಜನರ ತಲೆಗೆ ತಗುಲಿ ಪೆಟ್ಟಾಗಿರುವ ಸಾಕಷ್ಟು ಉದಾಹರಣೆಗಳು ವರದಿಯಾಗಿವೆ.

ಕೆಲವರಿಗೆ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಿದರ್ಶನಗಳು ಸಾಕಷ್ಟಿವೆ. ಇಂತಹ ಅಪಾಯದಿಂದ ಪಾರಾಗಲು ಆಯಾ ಕ್ರಾಸ್‌ಗಳ ನಿವಾಸಿಗಳು, ಅಂಗಡಿ ಮಾಲೀಕರು ಈ ಫಲಕಗಳ ಕೆಳಭಾಗಕ್ಕೆ ನೀರಿನ ಬಾಟಲಿ ಹಾಕಿ, ಮತ್ತೆ ಕೆಲವೆಡೆ ಬಟ್ಟೆಗಳನ್ನು ಸುತ್ತಿ ಅಥವಾ ಮೃದುವಾದ ವಸ್ತುಗಳಿಂದ ಮುಚ್ಚಿದ್ದಾರೆ. ಈ ನಾಮ ಫಲಕಗಳು ಸಾಕಷ್ಟು ಎತ್ತರವಾಗಿರದೇ ಕುಳ್ಳಾಗಿರುವುದು ಇಂತಹ ಅವಘಡಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ಇದು ಅವೈಜ್ಞಾನಿಕ ಕ್ರಮವಾಗಿದೆ. ನಗರ ಪಾಲಿಕೆ ಮತ್ತಷ್ಟು ಅವಘಡಗಳು ಸಂಭವಿಸುವ ಮೊದಲು ಈಗ ಅಳವಡಿಸಿರುವ ಮಾಹಿತಿ ಫಲಕಗಳನ್ನು ಎತ್ತರಿಸುವುದರ ಜೊತೆಗೆ ಮುಂದೆ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಮಾಹಿತಿ ಫಲಕಗಳು ಸಾಕಷ್ಟು ಎತ್ತರವಾಗಿರುವಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಅನುಷಾ ಎಂ., ಜೆ.ಪಿ.ನಗರ, ಮೈಸೂರು

Tags:
error: Content is protected !!