ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಆಸ್ಪತ್ರೆಗೆ ಹೋಗುವುದೆಂದರೆ ಜೀವ ಉಳಿಸಿಕೊಳ್ಳುವ ಭರವಸೆಗಿಂತ, ‘ಜೇಬಿಗೆಕತ್ತರಿ’ ಬೀಳುವ ಭೀತಿಯೇಹೆಚ್ಚಾಗಿದೆ.
ದೇಶದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಲ್ಲಿ ಅರ್ಧದಷ್ಟು ಅನಗತ್ಯ ಎಂಬ ವರದಿಗಳು ನಾಗರಿಕರನ್ನು ಬೆಚ್ಚಿ ಬೀಳಿಸಿವೆ. ರೋಗಿಯ ಪ್ರಾಣಕ್ಕಿಂತ ಹಣವೇ ದೊಡ್ಡದಾದಾಗ, ಪವಿತ್ರವಾದ ವೈದ್ಯಕೀಯ ವೃತ್ತಿಯ ಘನತೆ ಕುಸಿಯುತ್ತಿದೆ.
ಸತ್ತ ರೋಗಿಯನ್ನು ಬದುಕಿದ್ದಾರೆಂದು ಸುಳ್ಳುಹೇಳಿ ವೆಂಟಿಲೇಟರ್ ಬಿಲ್ ಮಾಡುವುದು ಹಾಗೂ ಕಮಿಷನ್ ಆಸೆಗಾಗಿ ಅನಗತ್ಯ ಪರೀಕ್ಷೆಗಳಿಗೆ ಶಿಫಾರಸು ಮಾಡುವುದು ಅಕ್ಷಮ್ಯ ಅಪರಾಧ. ‘ವೈದ್ಯೋ ನಾರಾಯಣೋಹರಿಃ’ ಎಂಬ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಬಡವರ ರಕ್ತಹೀರುವ ಈ ಮಾಫಿಯಾ ನಿಲ್ಲಬೇಕಿದೆ. ಔಷಧ ಕಂಪೆನಿಗಳ ಆಮಿಷಕ್ಕೆ ಒಳಗಾಗಿ ಜನರಿಕ್ ಮದ್ದುಗಳನ್ನು ನೀಡುವ ಬದಲು, ದುಬಾರಿ ಬ್ರ್ಯಾಂಡ್‌ಗಳನ್ನು ರೋಗಿಗಳ ಮೇಲೆ ಹೇರುವುದು ಎಷ್ಟುಸರಿ? ಸರ್ಕಾರವು ತಕ್ಷಣವೇ ಇಂತಹ ದಂಧೆ ನಡೆಸುವ ಆಸ್ಪತ್ರೆಗಳ ಮೇಲೆ ಕಠಿಣ ನಿಗಾ ಇಡಬೇಕು ಮತ್ತು ನಿಯಮ ಉಲ್ಲಂಘಿಸುವ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸಬೇಕು. ಜನ ಸಾಮಾನ್ಯರು ಆಸ್ಪತ್ರೆಗೆ ಹೋದಾಗ ಪರೀಕ್ಷೆ ಅಥವಾ ಶಸ್ತ್ರ ಚಿಕಿತ್ಸೆಯ ಅಗತ್ಯದ ಬಗ್ಗೆ ಸಂಶಯವಿದ್ದರೆ, ಮತ್ತೊಬ್ಬ ವೈದ್ಯರ ಅಭಿಪ್ರಾಯ (ಸಕೆಂಡ್ ಒಪೀನಿಯನ್) ಪಡೆಯಲು ಹಿಂಜರಿಯಬಾರದು. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಎನ್ನುವುದು ಸಾಮಾನ್ಯ ಜನರಿಗೆ ಲಭ್ಯವಾಗುವ ಗ್ಯಾರಂಟಿಯೇ ಇರುವುದಿಲ್ಲ.
– ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





