Mysore
23
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

ಓದುಗರ ಪತ್ರ: ಪ್ರೀಪೇಯ್ಡ್ ಆಟೋ ಚಾಲಕರಿಂದಲೂ ಸುಲಿಗೆ !

ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಪ್ರೀಪೇಯ್ಡ್ ಆಟೋ ಕೌಂಟರ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಅಲ್ಲಿ ನೀಡುವ ಪ್ರಯಾಣ ದರಕ್ಕಿಂತಲೂ ಹೆಚ್ಚುವರಿ ಹಣ ನೀಡಬೇಕು ಎಂದು ಆಟೋ ಚಾಲಕರು ಒತ್ತಾಯಿಸುವ ಮೂಲಕ ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದಾರೆ.

ಅ.೩೦ರ ರಾತ್ರಿ ಬೆಂಗಳೂರಿನಿಂದ ಮೈಸೂರಿಗೆ ಸಾರಿಗೆ ನಿಗಮದ ಬಸ್‌ನಲ್ಲಿ ಬಂದು ಡಿ. ಸುಬ್ಬಯ್ಯ ರಸ್ತೆಗೆ ಪ್ರೀಪೇಯ್ಡ್ ಕೌಂಟರ್‌ನಲ್ಲಿ ಟಿಕೆಟ್ ಪಡೆದಾಗ ೮೧ ರೂ. ಶುಲ್ಕವಿತ್ತು. ನಾವು ಪ್ರಯಾಣಿಸಿದ ಆಟೋ ಚಾಲಕ ಟ್ರಾಫಿಕ್ ಇದೆ, ಒನ್ವೇ ಇದೆ ನೀವು ಹೆಚ್ಚಿಗೆ ಹಣ ಕೊಡಬೇಕು ಎಂದು ಒತ್ತಾಯಿಸಿದ. ಎಲ್ಲೂಟ್ರಾಫಿಕ್ ಇರಲಿಲ್ಲ. ಮನೆಗೆ ತಲುಪಿದ ಕೂಡಲೇ ನಿಗದಿತ ದರ ೮೧ ರೂ. ನೀಡಲು ಹೋದಾಗ ಇನ್ನೂ ೧೯ ರೂ. ಸೇರಿಸಿ ೧೦೦ ರೂ. ಕೊಡಿ ಎಂದು ತಕರಾರು ತೆಗೆದ. ಕೊನೆಗೆ ೯೦ ರೂ. ನೀಡಿದರೂ ಬಾಡಿಗೆ ಹಣ ಸಾಲದಾಯಿತು ಎಂದು ಗೊಣಗುತ್ತಾ ತೆರಳಿದ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಪೇಯ್ಡ್ ಆಟೋ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ರಾತ್ರಿ ೧೦ ಗಂಟೆಯ ನಂತರ ಪ್ರಯಾಣ ದರದ ಒಂದೂವರೆ ಪಟ್ಟು ದರ ನಿಗದಿಪಡಿಸಲಾಗುತ್ತದೆ. ಆದರೂ ಆಟೋ ಚಾಲಕರು ಟ್ರಾಫಿಕ್ ಜಾಂ ಮೊದಲಾದ ನೆಪವೊಡ್ಡಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು.

 – ಪದ್ಮಶ್ರೀ, ಮೈಸೂರು

Tags:
error: Content is protected !!