ಸ್ವಚ್ಛತಾ ಪಟ್ಟಿಯಲ್ಲಿ ರಾಜ್ಯದಲ್ಲಿ ಮೈಸೂರು ಮಕುಟ ಧರಿಸಿರುವುದು ಹೆಮ್ಮೆಯ ಸಂಗತಿಯಾದರೂ ಶೇ.೯೦ಕ್ಕೂ ಹೆಚ್ಚು ನಗರಗಳಲ್ಲಿ ಇಂದಿಗೂ ಕಸದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು ಆಡಳಿತ ವೈಫಲ್ಯಕ್ಕೆ ಕನ್ನಡಿಯಾಗಿದೆ.
ಮೈಸೂರು ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳು ಕಸ ವಿಂಗಡಣೆ, ಪ್ರತಿದಿನ ಕಸ ಸಂಗ್ರಹ ಮತ್ತು ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕೇವಲ ಶೇ.೧೦ ರಷ್ಟು ನಗರಗಳ ಯಶಸ್ಸು ಇಡೀ ರಾಜ್ಯದ ಚಿತ್ರಣವನ್ನು ಬದಲಿಸಲಾರದು. ಸರ್ಕಾರವು ಪ್ರತಿ ನಗರಕ್ಕೂ ಕಸ ಸಂಸ್ಕರಣಾ ಘಟಕ ಹಾಗೂ ಆಧುನಿಕ ವಾಹನಗಳನ್ನು ಒದಗಿಸಬೇಕು.
ನಾಗರಿಕರೂ ರಸ್ತೆಗೆ ಕಸ ಎಸೆಯುವ ಚಾಳಿಯನ್ನು ಬಿಟ್ಟು ಸ್ವಚ್ಛತೆಯನ್ನು ಕೇವಲ ಅಭಿಯಾನವಾಗಿ ನೋಡದೆ ಬದುಕಿನ ಭಾಗವಾಗಿಸಿಕೊಂಡರೆ ಮಾತ್ರ ನಮ್ಮ ರಾಜ್ಯವು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಲು ಸಾಧ್ಯ.
-ಡಾ.ಎಚ್. ಕೆ.ವಿಜಯಕುಮಾರ್ , ಬೆಂಗಳೂರು



