ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಪ್ರಚೋದನಕಾರಿಯಾಗಿ, ಸಿನಿಮಾ ಶೈಲಿಯಲ್ಲಿ ಭಾಷಣ ಬಿಗಿದು ಜಾ.ದಳ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿರುವುದು ಪ್ರದೀಪ್ ಈಶ್ವರ್ ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿಯವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಘಟನೆಗೆ ಸಂಬಂಧಿಸಿದಂತೆ ಒಂದು ಮನವಿ ಮಾಡಿ, ದಯಮಾಡಿ, ಯಾರೂ ಇಂತಹ ಪ್ರಚೋದನಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬೇಡಿ, ಚಪ್ಪಲಿ ಎಸೆಯುವುದೆ ಮಾಡಬೇಡಿ ಅದು ನಮ್ಮ ಸಂಸ್ಕೃತಿಯಲ್ಲ ಎಂದಿದ್ದಾರೆ. ಆದರೆ ನಾವು ಇತಿಹಾಸ ನೋಡಿದಾಗ ಚಪ್ಪಲಿ ಎಸೆತದ ಪ್ರಕರಣ ರಾಮಕೃಷ್ಣ ಹೆಗಡೆಯರ ಕಾಲದಲೂ ಆಗಿರುವುದು ನೆನಪಿಗೆ ಬರುತ್ತದೆ.
ಇಲ್ಲಿ ಪರಸ್ಪರ ಶಾಸಕರು ಮತ್ತು ಕೇಂದ್ರ ಸಚಿವರು ನಿಂದಿಸಿಕೊಳ್ಳುತ್ತಾ ವೃಥಾ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಜನರ ಮುಂದೆ ಬೇಕಾದಷ್ಟು ಸಮಸ್ಯೆಗಳು ಇರುವಾಗ ಈ ನಾಯಕರುಗಳು ಜತಿ ವಿಚಾರಗಳನ್ನು, ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ರಂಪ ಮಾಡುತ್ತಿರುವುದು ತರವಲ್ಲ. ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿ ಮತದಾರರ ಋಣ ತೀರಿಸುವತ್ತ ಚಿತ್ತಹರಿಸಿದರೆ ಒಳಿತು.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು


