Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಹನೂರು ಗುಂಡಿನ ದಾಳಿ: ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ ಕುಟುಂಬಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಖೆ ಅರಣ್ಯದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡನೇ ದಿನವೂ ಭಾನುವಾರ ಪ್ರತಿಭಟನೆ ಮುಂದುವರೆಸಿದ್ದಾರೆ.

ಶನಿವಾರ ಏನಾಗಿತ್ತು?: ಶನಿವಾರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಅರಣ್ಯ ಇಲಾಖೆ ಅಧಿಕಾರಿಗಳು ಪಾಳ್ಯ ಸಮೀಪದ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಪೀಟರ್, ಕುಮಾರ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟಿದ್ದರು. ಇದನ್ನು ವಿರೋಧಿಸಿ ಕುಟುಂಬಸ್ಥರು ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರಸ್ತೆ ತಡೆ ನಡೆಸಿದ್ದರು.

ಪ್ರತಿಭಟನಾಕಾರರ ಬೇಡಿಕೆ: ಗುಂಡಿನ ದಾಳಿ ನಡೆಸಿ ಮೂವರ ಸಾವಿಗೆ ಕಾರಣವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು. ಮೃತ ಮೂರು ಕುಟುಂಬಗಳಿಗೆ ತಲಾ 2 ಕೋಟಿ ರೂ. ಪರಿಹಾರ ನೀಡಿ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದರು.

ಶಾಸಕರ ಭರವಸೆ – ಕುಟುಂಬಸ್ಥರ ನಿರಾಕರಣೆ: ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಮೃತಪಟ್ಟ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಮನವೊಲಿಸಿದರು. ಮರಣೋತ್ತರ ಪರೀಕ್ಷೆಗಾಗಿ ಕುಟುಂಬಸ್ಥರನ್ನು ಮೈಸೂರಿಗೆ ಕಳುಹಿಸಿಕೊಟ್ಟರು.

ಆದರೆ ಕುಟುಂಬಸ್ಥರು ಮೈಸೂರಿಗೆ ತೆರಳಿ, “ನಮಗೆ ಸೂಕ್ತ ಪರಿಹಾರ ಘೋಷಣೆ ಮಾಡುವವರೆಗೂ ಯಾವುದೇ ಕಾರಣಕ್ಕೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿ ವಾಪಸ್ ಆಗಿದ್ದಾರೆ.

ಪೊಲೀಸರ ಮಧ್ಯಸ್ಥಿಕೆ: ಪ್ರತಿಭಟನೆ ನಿರಂತರವಾಗಿ ಮುಂದುವರೆದಿದ್ದರಿಂದ ಮಧ್ಯರಾತ್ರಿ 2 ಗಂಟೆಗೆ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು. ಪ್ರತಿಭಟನಾಕಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಅವರು ಸ್ಥಳಕ್ಕೆ ಬಂದು “ನಿಮ್ಮ ಜೊತೆ ನಾವು ಇದ್ದೇವೆ. ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಪ್ರತಿಭಟನೆ ನಡೆಸಿ” ಎಂದು ಮನವೊಲಿಸಿದ್ದರು.

ಭಾನುವಾರವೂ ಸಹ ಕುಟುಂಬಸ್ಥರು ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪರಿಹಾರದ ಮೊತ್ತ ಹಾಗೂ ಉದ್ಯೋಗದ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

ಈ ಪ್ರಕರಣವು ಇದೀಗ ರಾಜ್ಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಆಡಳಿತ ಮತ್ತು ಕುಟುಂಬಸ್ಥರ ನಡುವಿನ ಮಾತುಕತೆ ಮುಂದುವರೆದಿದೆ.

Tags:
error: Content is protected !!