ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರೂ ಗೂಗಲ್ ಪೇ , ಫೋನ್ ಪೇ ನಲ್ಲಿ ವ್ಯವಹರಿಸಿ ವ್ಯಾಪಾರ ಮಾಡುವುದು ಸಾಮಾನ್ಯವಾಗಿತ್ತು. ಗ್ರಾಹಕರ ಬಳಿ ಮೊಬೈಲ್ ಇದ್ದರೆ ಸಾಕು ಗೂಗಲ್ ಪೇ, ಫೋನ್ ಪೇ ಮುಖಾಂತರ ಹಣ ಪಾವತಿ ಮಾಡಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು.
ಆದರೆ ಇತ್ತೀಚೆಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣಪುಟ್ಟ ವ್ಯಾಪಾರಿಗಳಿಗೂ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದರಿಂದ ಅಂಗಡಿಗಳ ಮಾಲೀಕರು ಅಂಗಡಿಯ ಮುಂದೆ ಗೂಗಲ್ ಪೇ ಹಾಗೂ ಫೋನ್ ಪೇ ಮುಖಾಂತರ ವ್ಯವಹರಿಸುವುದಿಲ್ಲ ಎಂದು ಬೋರ್ಡ್ ಹಾಕಿದ್ದಾರೆ.
ಇದರಿಂದ ಗ್ರಾಹಕರು ಅಂಗಡಿಗಳಲ್ಲಿ ಹಣ ಕೊಟ್ಟು ವ್ಯವಹಾರ ಮಾಡುವುದು ಅನಿವಾರ್ಯವಾಗಿರುವುದರಿಂದ ಚಿಲ್ಲರೆ ಸಮಸ್ಯೆ ಉದ್ಭವಿಸುತ್ತಿದೆ. ಸಂಬಂಧಪಟ್ಟವರು ಕೂಡಲೇ ವ್ಯಾಪಾರಿಗಳ ಸಮಸ್ಯೆಯನ್ನು ನಿವಾರಿಸಿ ಗೂಗಲ್ ಪೇ, ಫೋನ್ ಪೇ ಮೂಲಕ ವ್ಯವಹಾರ ನಡೆಸಲು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.
-ಎಂ. ಎಸ್. ಉಷಾ ಪ್ರಕಾಶ್ , ಎಸ್. ಬಿ.ಎಂ.ಕಾಲೋನಿ ಮೈಸೂರು





