ಮೈಸೂರಿನ ಕುವೆಂಪು ನಗರದ ‘ಐ’ ಬ್ಲಾಕ್‌ನ ಕೆಇಬಿ ಕಚೇರಿ ಹಿಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ ೮ರಿಂದ ೧೧ಗಂಟೆಯ ತನಕ ಕೆಲವು ಕುಡುಕರು ರಸ್ತೆ ಬದಿಯಲ್ಲಿ ತಮ್ಮ ಕಾರು, ಆಟೋಗಳನ್ನು ನಿಲ್ಲಿಸಿಕೊಂಡು ಕುಡಿದು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡಿ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದಿರುವುದು ಕುಡುಕರಿಗೆ ವರದಾನವಾಗಿದೆ. ಕುವೆಂಪು ನಗರದ ಐ ಬ್ಲಾಕ್ ಸಮೀಪದಲ್ಲೇ ಅಶೋಕಪುರಂ ಪೊಲೀಸ್ ಠಾಣೆ ಇದ್ದರೂ, ಇವರಿಗೆ ಯಾವ ಪೊಲೀಸರ ಭಯವೂ ಇಲ್ಲದಂತಾಗಿದೆ. ಈ ಭಾಗದಲ್ಲಿ ಕೆಲವು ಸಭ್ಯರೆನಿಸಿಕೊಂಡವರೂ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಕುಳಿತು ರಾಜಾರೋಷವಾಗಿ ಮದ್ಯಪಾನ ಮಾಡುವ ಮೂಲಕ ಅನಾಗರಿಕರಂತೆ ವರ್ತಿಸುತ್ತಿದ್ದಾರೆ.
ಮೈಸೂರು ನಗರದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯಿದ್ದರೂ ಕಡುಕರ ಹಾವಳಿ ಮಿತಿ ಮೀರಿದೆ. ಇದು ಕೇವಲ ಕುವೆಂಪು ನಗರದ ಸಮಸ್ಯೆಯಲ್ಲ, ಮೈಸೂರಿನ ಬಹುತೇಕ ಪಾರ್ಕ್‌ಗಳಲ್ಲಿ ಮತ್ತು ಬೀದಿ ದೀಪಗಳು ಇಲ್ಲದ ಕಡೆಗಳಲ್ಲಿ ಈ ರೀತಿಯ ಸಮಸ್ಯೆ ಸಾಮಾನ್ಯವಾಗಿದೆ. ರಾತ್ರಿ ವೇಳೆ ಕುಡಿದು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿರುವ ಮದ್ಯವ್ಯಸನಿಗಳ ಹಾವಳಿಗೆ ನಗರದ ಪೊಲೀಸ್ ಕಮಿಷನರ್ ರವರು ಕಡಿವಾಣ ಹಾಕುವುದು ಅಗತ್ಯವಾಗಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





