೨೦೧೪ರಲ್ಲಿ ಮಲ್ಲಸಂದ್ರ ಗ್ರಾಮದಿಂದ ಅರಸೀಕೆರೆ ಪಟ್ಟಣಕ್ಕೆ ತಂದೆ, ಸಹೋದರಿ ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಸಾವಿಗೀಡಾದ ರವೀಶ್ ಎಂಬವರ ಕುಟುಂಬಕ್ಕೆ, ಪರಿಹಾರ ನೀಡಬೇಕಾಗಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಅಘಾತ ತಂದಿದೆ. ರವೀಶ್ ಕುಟುಂಬದವರು ೮೦ ಲಕ್ಷ ರೂ. ಪರಿಹಾರ ಕೋರಿದ್ದರು. ಹೈ ಕೋರ್ಟ್ ನಿರಾಕರಿಸಿತ್ತು. ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದು ಚಾಲಕನ ತಪ್ಪಿನಿಂದ ಆದ ಅಪಘಾತ, ಕುಟುಂಬಕ್ಕೆ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರು ತಮ್ಮ ಕಾರಿಗೆ ವಿಮೆ ಮೊತ್ತವನ್ನು ಕಟ್ಟಿದ್ದಾರೆ. ವಿಮೆ ಮಾಡಿಸುವ ಉದ್ದೇಶವೇ ದುಡಿಯುವ ವ್ಯಕ್ತಿ ಅಪಘಾತದಿಂದ ನಿಧನರಾದರೆ ತಮ್ಮ ಕುಟುಂಬಕ್ಕೆ ಪರಿಹಾರ ದೊರೆಯಲಿ ಎಂಬ ಉದ್ದೇಶದಿಂದ. ಹಾಗಿದ್ದರೆ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂಬ ನಿಯಮ ಏಕೆ? ಟ್ರಾಫಿಕ್ ಪೊಲೀಸರು ವಿಮೆ, ಹೆಲ್ಮೆಟ್ ತಪಾಸಣೆ ಮಾಡುವುದೇಕೆ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಾಹನ ಅಪಘಾತದಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ವಿಮಾ ಕಂಪೆನಿಗಳು ಸೂಕ್ತ ಪರಿಹಾರ ನೀಡಲು ವಿಮಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬೇಕು.
– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.