ಬೇಸಿಗೆ ರಜೆ ಮುಗಿದು ಶಾಲೆಗಳು ಪುನರಾರಂಭವಾಗಿವೆ. ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ತರಗತಿಗಳಿಗೆ ಹಾಜರಾಗಿರುವ ಬಗ್ಗೆ ಮಾಧ್ಯಮಗಳ ವರದಿ ಮಾಡಿವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯ ಬೋಧನೆಯನ್ನು ಯಾವಾಗ ಆರಂಭಿಸುತ್ತಾರೆ ಎಂಬುದನ್ನು ಆಲೋಚಿಸಬೇಕಾಗಿದೆ. ಅವರಿಗಿರುವ ಕಾರ್ಯಭಾರಗಳ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ರಾಜ್ಯ ಸರ್ಕಾರಒತ್ತು ನೀಡಬೇಕು. ಇಲ್ಲದಿದ್ದರೆ ಶಾಲೆಗಳು ಶುರುವಾದರೂ ಪಾಠ ಪ್ರವಚನಗಳು ನಡೆಯದಿದ್ದರೆ ಏನು ಪ್ರಯೋಜನ?
ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿ ಶಾಲಾ ದಾಖಲಾತಿ ಆಂದೋಲನ ನಡೆಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು… ಇಂತಹ ಕಾರ್ಯಗಳನ್ನೂ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಶಿಕ್ಷಕರ ಕೊರತೆ ಇದ್ದೇ ಇರುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ಒದಗಿಸುವುದು ಕಷ್ಟಸಾಧ್ಯ. ಖಾಸಗಿ ಶಾಲೆಗಳಿಗೆ ಸ್ವತಃ ಪೋಷಕರೇ ಮಕ್ಕಳನ್ನು ದಾಖಲಿಸುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳ ಮನೆ ಬಾಗಿಲಿಗೆ ಹೋಗುವುದು ಅನಿವಾರ್ಯ ಎಂಬಂತಾಗಿದೆ.
ಬಹಳಷ್ಟು ಕಡೆ ಏಕೋಪಾಧ್ಯಾಯ ಶಾಲೆಗಳಿವೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಯಾವ ಪೋಷಕರು ಮುಂದೆ ಬರುತ್ತಾರೆ? ಅಲ್ಲದೆ, ಶಾಲೆಗಳಲ್ಲಿ ಪಠ್ಯ ಪುಸ್ತಕಗಳು, ಸಮವಸ್ತ್ರ ಇತ್ಯಾದಿಯನ್ನು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಒದಗಿಸಬೇಕು ನಿಜ. ಆ ಜವಾಬ್ದಾರಿಯನ್ನೂ ಶಿಕ್ಷಕರ ಹೆಗಲಿಗೇ ಹಾಕುವುದು ಎಷ್ಟು ಸರಿ? ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಎಂ.ಎಚ್.ರಾಜಾರಾಮ್, ಸರಸ್ವತಿಪುರಂ, ಮೈಸೂರು





