ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್
ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ ಪಿಯು ಕಾಲೇಜುಗಳ ಪೈಕಿ ಸರ್ಕಾರಿ ಕಾಲೇಜುಗಳ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲಿ ಬಹುತೇಕ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚು ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಚಿಕ್ಕದೇವಮ್ಮ ಕಲಾ ವಿಭಾಗದಲ್ಲಿ ೫೬೯ ಅಂಕ (ಶೇ. ೯೪. ೮೩) ಪಡೆದು ಸಾಧನೆ ಮಾಡಿದ್ದಾರೆ. ಈಕೆ ಬನ್ನಿತಾಳಪುರ ಗ್ರಾಮದ ಬಸವಶೆಟ್ಟಿ ಮತ್ತು ಸೌಮ್ಯ ದಂಪತಿಯ ಪುತ್ರಿ.
ತಂದೆ ಬಸವಶೆಟ್ಟಿ ಕೂಲಿ ಕೆಲಸ ಮಾಡಿಕೊಂಡಿದ್ದು, ನಮಗೆ ಎಷ್ಟೇ ಕಷ್ಟ ಇದ್ದರೂ ಮಗಳು ಎಲ್ಲಿಯವರೆಗೆ ಓದುತ್ತೇನೆ ಎನ್ನು ತ್ತಾಳೆಯೋ ಅಲ್ಲಿಯವರೆಗೂ ಓದಿಸುತ್ತೇನೆ. ಯಾರೂ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡದೆ ಉತ್ತಮ ಶಿಕ್ಷಣ ಕೊಡಿಸಬೇಕು. ನಾನು ೨೫ ವರ್ಷದವರೆಗೂ ಮಗಳ ಮದುವೆ ಮಾಡುವುದಿಲ್ಲ. ಆಕೆಯ ಶಿಕ್ಷಣಕ್ಕೆ ಒತ್ತು ನೀಡಿ ಓದಿಸುತ್ತೇನೆ ಎನ್ನುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಸಿಂಚನ ಎಂಬ ವಿದ್ಯಾರ್ಥಿನಿ ೬೦೦ ಅಂಕಗಳಿಗೆ ೫೮೩ ಅಂಕ ಪಡೆದಿದ್ದಾರೆ. ಈಕೆಯ ತಂದೆ ಮಹೇಶ್, ತಾಯಿ ಪೂರ್ಣಿಮ ಬೀಡಿ ಕಾರ್ಮಿಕರಾಗಿದ್ದು, ಮನೆಯಲ್ಲಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ. ಈಕೆ ಮಾವನ ಮನೆಯಲ್ಲಿ ಇದ್ದುಕೊಂಡು ಓದುತ್ತ ಈ ಸಾಧನೆ ಮಾಡಿದ್ದು, ಮುಂದೆ ಸಿಎ ಆಗುವ ಆಸೆ ಹೊಂದಿದ್ದಾರೆ.
ಪಟ್ಟಣದ ಮಾನಸ ಪಿಯು ಕಾಲೇಜಿನ ಮಾನಸ ವಿಜ್ಞಾನ ವಿಭಾಗದಲ್ಲಿ ಹಂಗಳ ಗ್ರಾಮದ ಎಚ್. ಕೆ. ಸ್ನೇಹ ೬೦೦ಕ್ಕೆ ೫೮೪ ಅಂಕ ಪಡೆದಿದ್ದು (ಶೇ. ೯೭. ೩೩) ಈ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈಕೆಯ ತಂದೆ ಕುಮಾರ್, ತಾಯಿ ಸರ್ವಮಂಗಳ ವ್ಯವಸಾಯ ಮಾಡುತ್ತಿದ್ದಾರೆ. ತಂದೆ ಕುಮಾರ್ ಮಾತನಾಡಿ, ನಮಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರೇ ಆಸ್ತಿ. ತುಂಬ ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದೇವೆ. ಅವರು ಎಷ್ಟು ಓದಿದರೂ ಓದಿಸುತ್ತೇವೆ ಎಂದರು.
ವಾಣಿಜ್ಯ ವಿಭಾಗದಲ್ಲಿ ಪ್ರಣತಿ ಎಂಬ ವಿದ್ಯಾರ್ಥಿನಿ ೬೦೦ಕ್ಕೆ ೫೮೬ ಅಂಕ (ಶೇ. ೯೭. ೬೬) ಪಡೆದಿದ್ದು, ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈಕೆಯ ತಂದೆ ಶಿವಶಂಕರಪ್ಪ ಮತ್ತು ಸವಿತ ದಂಪತಿ ಕೃಷಿಯಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಓದಿಸುತ್ತಿದ್ದಾರೆ. ಪ್ರಣತಿ ಮುಂದೆ ಬಿಕಾಂ, ಸಿಎ ಓದುವ ಹಂಬಲ ವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್‌ಎಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ೬೦೦ಕ್ಕೆ ೫೭೮ ಅಂಕ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ದಿವ್ಯಾ ಅಂಕಹಳ್ಳಿ ಗ್ರಾಮದ ಗುರುಸ್ವಾಮಿ ಮತ್ತು ಬಸಮಣಿಯವರ ಪುತ್ರಿ. ಈಕೆಯ ತಂದೆ ತಾಯಿ ವ್ಯವಸಾಯ ಮಾಡುತ್ತಲೇ ಮಗಳ ಭವಿಷ್ಯದ ಬಗ್ಗೆ ಕನಸು ಕಂಡವರು. ಪೋಷಕರ ಆಸೆಯಂತೆ ಉತ್ತಮ ಅಂಕ ಪಡೆದು ಮುಂದೆ ಬಿಬಿಎ ಅಥವಾ ಬಿಸಿಎ ಓದುವ ಅಭಿಲಾಷೆ ಹೊಂದಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ಅಮೂಲ್ಯ ಅಗತಗೌಡನಹಳ್ಳಿ ಗ್ರಾಮದ ಪ್ರಕಾಶ್ ಮತ್ತು ಲಕ್ಷ್ಮೀ ದಂಪತಿಯ ಪುತ್ರಿ. ತಂದೆ ವಿಶ್ವಕರ್ಮ ಕೆಲಸ ಮಾಡಿ ಮಗಳನ್ನು ಓದಿಸುತ್ತಿದ್ದಾರೆ. ಈಕೆ ಮುಂದೆ ಬಿಸಿಎ ಓದುವ ಆಸೆ ವ್ಯಕ್ತಪಡಿಸಿದ್ದಾರೆ.





