ನವೀನ್ ಡಿಸೋಜ
ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಶೀತ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಾಹಾರ ಗೃಹಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶುದ್ಧ ಬಿಸಿ ನೀರನ್ನು ಉಚಿತವಾಗಿ ಒದಗಿಸುವಂತೆ ಸೂಚಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-೨೦೦೬ರ ಕಲಂ ೩೦(೨)(ಡಿ) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಾವಳಿ-೨೦೧೧ರ ಅನುಸೂಚಿ-೪ರ ಅನ್ವಯ ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಆಹಾರ ಮಳಿಗೆಗಳ ಜವಾಬ್ದಾರಿಯಾಗಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಾಹಾರ ಗೃಹಗಳಿಗೆ ಬರುವ ಗ್ರಾಹಕರು ಆಹಾರ ಸೇವಿಸಿದ ಬಳಿಕ ಶುದ್ಧ ಕುಡಿಯುವ ನೀರು ಪಡೆಯುವುದು ಅವರ ಮೂಲಭೂತ ಅಗತ್ಯವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಶುದ್ಧ ಕುಡಿಯುವ ನೀರನ್ನು ನಿರಾಕರಿಸಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿ : ಕುಡಿಯುವ ನೀರಿನ ಗುಣಮಟ್ಟದ ಜೊತೆಗೆ ಹೋಟೆಲ್ ಹಾಗೂ ಆಹಾರ ಮಳಿಗೆಗಳಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣೆಯಲ್ಲೂ ಸ್ವಚ್ಛತೆ ಕಾಪಾಡಬೇಕು. ಆಹಾರ ತಯಾರಿಸುವ ಸ್ಥಳ, ಪಾತ್ರೆಗಳು ಹಾಗೂ ಬಳಸುವ ಪರಿಕರಗಳನ್ನು ಸ್ವಚ್ಛವಾಗಿಡಬೇಕು. ಆಹಾರಕ್ಕೆ ಬಳಸುವ ನೀರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆಹಾರ ಪದಾರ್ಥಗಳ ತಯಾರಿಕೆ, ಸಂಗ್ರಹಣೆ ಹಾಗೂ ವಿತರಣೆಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆಹಾರ ವ್ಯಾಪಾರಿಗಳಿಗೆ ಸೂಚಿಸಲಾಗಿದೆ.
ದೂರು ನೀಡಲು ೧೯೧೫ ಸಂಪರ್ಕಿಸಿ: ಗ್ರಾಹಕರಿಗೆ ಶುದ್ಧ ಕುಡಿಯುವ ನೀರನ್ನು ನೀಡಲು ನಿರಾಕರಿಸಿದರೆ ಅಥವಾ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರು ಎಫ್‌ಎಸ್‌ಎಸ್‌ಎಐ ರಾಷ್ಟ್ರೀಯ ಸಹಾಯವಾಣಿ ೧೯೧೫ಕ್ಕೆ ದೂರು ಸಲ್ಲಿಸಬಹುದಾಗಿದೆ.
” ಮಳೆಗಾಲದಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದಂತೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಉಪಾಹಾರ ಗೃಹಗಳಲ್ಲಿ ಆಹಾರ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೋಟೆಲ್ ಹಾಗೂ ಆಹಾರ ವ್ಯಾಪಾರಿಗಳು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಸ್ವಚ್ಛತೆ, ಸುರಕ್ಷಿತ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.”
ಡಾ. ಇ.ಅನಿಲ್ ಧಾವನ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ




