Mysore
25
broken clouds

Social Media

ಬುಧವಾರ, 18 ನವೆಂಬರ್ 2026
Light
Dark

ಅಪರಾಧ ತಡೆಗೆ ಆದ್ಯತೆ… ಜನಸ್ನೇಹಿಯಾಗಲು ಬದ್ಧತೆ…

ದಿನೇಶ್ ಕುಮಾರ್ ಎಚ್.ಎಸ್.

‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡ ನೂತನ ಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್

ಮೈಸೂರು: ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಕೂಡ ಒಂದು. ಹಾಗಾಗಿ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ದಸರಾ ಇನ್ನಿತರೆ ಸಂದರ್ಭಗಳಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ದೊಡ್ಡ ರಾಜಕೀಯ ಸಮಾವೇಶಗಳೂ ಮೇಲಿಂದ ಮೇಲೆ ನಡೆಯುತ್ತಿರುತ್ತವೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸುಗಮ ಸಂಚಾರ ಹಾಗೂ ಭದ್ರತೆ ಒಂದು ಸವಾಲೇ ಸರಿ. ಇಂತಹ ಮಹಾ ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಎನ್.ವಿಷ್ಣುವರ್ಧನ್ ಅವರು ಮೈಸೂರು ಭದ್ರತೆ ಬಗ್ಗೆ ‘ಆಂದೋಲನ’ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆಂ: ಮೈಸೂರು ಮಾಜಿ ಮುಖ್ಯಮಂತ್ರಿಗಳ ತವರು ಹಾಗೂ ಹಾಲಿ ಮುಖ್ಯಮಂತ್ರಿಗಳು ಮೈಸೂರಿನ ಅಳಿಯ. ಇಂತಹ ಹಲವು ಹೆಗ್ಗಳಿಕೆಗಳಿರುವ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೀರಿ; ನಿಮಗೆ ಹೇಗನಿಸುತ್ತಿದೆ?

ವಿಷ್ಣುವರ್ಧನ್: ಮೈಸೂರು ಜಿಲ್ಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಂಟಿದೆ. ಹೀಗಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಜತೆಗೆ ಹೆಚ್ಚಿನ ಜವಾಬ್ದಾರಿಯೂ ಇದೆ. ಇಲ್ಲಿನ ಜನರು ಶಾಂತಿಪ್ರಿಯರು. ನಾವು ಯಾವುದೇ ಯೋಜನೆಗಳನ್ನು ಹಮ್ಮಿಕೊಂಡರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಹೀಗಾಗಿ ಇಲ್ಲಿ ಕೆಲಸ ನಿರ್ವಹಿಸಲು ಸಂತೋಷವಾಗುತ್ತದೆ.

ಆಂ: ನಗರದಲ್ಲಿ ಅಪರಾಧ ಪ್ರಕರಣ ಹಾಗೂ ರೌಡಿಗಳ ಹಾವಳಿ ತಡೆಗಟ್ಟಲು ನೀವು ತೆಗೆದುಕೊಳ್ಳುವ ಕ್ರಮಗಳೇನು?

ವಿಷ್ಣುವರ್ಧನ್: ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆ ಇದೆ. ನಮ್ಮ ಇಲಾಖೆ ಮೊದಲಿನಿಂದಲೂ ಸಮಾಜ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಜನಸ್ನೇಹಿ ಪೊಲೀಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.  ಇದರೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ರೌಡಿಗಳನ್ನು ನಿಗ್ರಹಿಸಲು ಮೊದಲ ಆದ್ಯತೆ ನೀಡಲಾಗುವುದು.

ಆಂ: ಮೈಸೂರು ಭಾಗದಲ್ಲಿ ಮಾದಕ ವಸ್ತು ಬಳಕೆ ಹಾಗೂ ಮಾರಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ತಡೆಗೆ ಏನು ಕ್ರಮ ಕೈಗೊಳ್ಳುತ್ತೀರಿ?

ವಿಷ್ಣುವರ್ಧನ್: ಮಾದಕ ವಸ್ತು ಮಾರಾಟ ಎಂಬುದು ಸಂಘಟಿತ ಅಪರಾಧ. ಇದಕ್ಕೆ ವಿಶೇಷ ಕಾರ್ಯಾಚರಣೆ ಎಂಬುದಿಲ್ಲ. ವರ್ಷಪೂರ್ತಿ ನಿರಂತರವಾಗಿ ಪೊಲೀಸರು ಹದ್ದಿನ ಕಣ್ಣಿಡಬೇಕಾಗುತ್ತದೆ. ಇನ್ನು ಮಾದಕ ವಸ್ತು ದುಷ್ಪರಿಣಾಮ ಕುರಿತು ಶಾಲಾ-ಕಾಲೇಜು ಹಂತದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು.

ಆಂ: ಇಂದು ವೇಶ್ಯಾವಾಟಿಕೆ ಹೈಟೆಕ್ ಆಗುತ್ತಿದೆ. ಮಸಾಜ್ ಹೆಸರಿನಲ್ಲಿ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?

ವಿಷ್ಣುವರ್ಧನ್: ವೇಶ್ಯಾವಾಟಿಕೆ ಎಂಬುದು ಸಾಮಾಜಿಕ ಪಿಡುಗು. ಇದನ್ನು ಹತ್ತಿಕ್ಕಬೇಕಾದುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಈ ಸಂಬಂಧ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಸಂಬಂಧ ಮಾಹಿತಿ ನೀಡುವ ಮೂಲಕ ನಮ್ಮೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ವೇಶ್ಯಾವಾಟಿಕೆ ಚಟುವಟಿಕೆಯನ್ನು ತಡೆಗಟ್ಟಬಹುದು.

ಆಂ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶವಗಳನ್ನು ಎಸೆಯಲಾಗಿತ್ತು. ೧೨ ದಿನಗಳಾದರೂ ಶವಗಳು ಇಲ್ಲಿರುವುದು ಗಸ್ತು ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗಸ್ತನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ಬಗ್ಗೆ ಚಿಂತನೆ ಇದೆಯೇ?

ವಿಷ್ಣುವರ್ಧನ್: ನಗರದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಬೇಕಾದಲ್ಲಿ ಬೀಟ್ ಪೊಲೀಸರು ಗಸ್ತನ್ನು ಬದ್ಧತೆಯಿಂದ ಮಾಡಬೇಕು. ಈ ಸಂಬಂಧ ಅವರುಗಳಿಗೆ ಆಗಿಂದಾಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಇನ್ನು ಮುಂದೆ ಗಸ್ತನ್ನು ಪರಿಣಾಮಕಾರಿಯಾಗಿ ನಡೆಸಲು ಆಗಾಗ್ಗೆ ಪೊಲೀಸ್ ಸಿಬ್ಬಂದಿಗಳಿಗೆ ಸಭೆಯ ಮೂಲಕ ಸೂಚನೆ ನೀಡಲಾಗುವುದು.

ಆಂ: ನಿಮ್ಮ ಕೈ ಕೆಳಗಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ?

ವಿಷ್ಣುವರ್ಧನ್: ಯಾವುದೇ ನಗರದಲ್ಲಾಗಲಿ ಜನರು ಶಾಂತಿ, ನೆಮ್ಮದಿಯಿಂದ ಇರಬೇಕಾದಲ್ಲಿ ಪೊಲೀಸರ ಕಾರ್ಯವೈಖರಿ ಸರಿಯಿರಬೇಕು. ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಹೊಂದಬೇಕು. ಈ ವಿಚಾರದಲ್ಲಿ ಮೈಸೂರಿನಲ್ಲಿ ಕೆಲಸ ಮಾಡುತ್ತಿ ರುವ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ವಾಗಿ ತಮ್ಮ  ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮುಂದೆಯೂ ಅವರ ಕಾರ್ಯವೈಖರಿ ಹೀಗೇ ಇರುತ್ತದೆ ಎಂಬ ವಿಶ್ವಾಸವಿದೆ.

ಆಂ: ನಾಗರಿಕರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ವಿಶ್ವಾಸ ಮೂಡಿಸಲು ನೀವು ತೆಗೆದುಕೊಳ್ಳುವ ಕ್ರಮಗಳೇನು?

ವಿಷ್ಣುವರ್ಧನ್: ನಗರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸಬೇಕಾದಲ್ಲಿ ಹಾಗೂ ಅಪರಾಧಗಳನ್ನು ತಡೆಗಟ್ಟಬೇಕಾದಲ್ಲಿ ಜನರ ಸಹಕಾರ ಅತ್ಯಗತ್ಯ. ಹೀಗಾಗಿ ಆಯಾ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕು ಎಂದು ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ಮೊದಲ ಸಭೆಯಲ್ಲಿಯೇ ಈ ಕುರಿತು ಮಾತನಾಡಿದ್ದೇನೆ. ಜನರೊಂದಿಗೆ ವಿಶ್ವಾಸದಿಂದ ಇರದಿದ್ದರೆ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ.

ಆಂ: ಈ ಹಿಂದೆ ನಗರದ ಆಯುಕ್ತರಾಗಿದ್ದ ಅನೇಕರು ತಮ್ಮ ಕರ್ತವ್ಯ ನಿಷ್ಠೆಯಿಂದ ಹೆಸರಾಗಿದ್ದರು. ಅಂತಹ ವೃತ್ತಿಪರತೆ ಈಗ ಕಡಿಮೆಯಾಗಿದೆ ಎನಿಸುತ್ತಿಲ್ಲವೆ? ಈ ಬಗ್ಗೆ ಏನು ಹೇಳುತ್ತೀರಿ?

ವಿಷ್ಣುವರ್ಧನ್: ಅದು ನಿಜ. ಮೈಸೂರಿನಲ್ಲಿ ಅನೇಕರು ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರುಗಳು ತೆಗೆದುಕೊಂಡಿರುವ ಅನೇಕ ಕ್ರಮಗಳ ಬಗ್ಗೆ ಇಂದಿಗೂ ಇಲ್ಲಿನ ಜನರು ನೆನಪಿಸಿಕೊಳ್ಳುತ್ತಾರೆ. ಅವರು ಹಾಕಿಕೊಟ್ಟ ಮಾದರಿಯಲ್ಲಿಯೇ ನಾವುಗಳು ಕೂಡ ಕೆಲಸ ಮಾಡುತ್ತೇವೆ ಎಂಬುದರಲ್ಲಿ ಎರಡು ಮಾತಿಲ್ಲ. ಪೊಲೀಸರಲ್ಲಿ ವೃತ್ತಿಪರತೆ ಕಡಿಮೆಯಾಗಿದೆ ಎಂದು ನನಗನಿಸುವುದಿಲ್ಲ.

ಆಂ: ನಗರದ ಅನೇಕ ಕಡೆಗಳಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಸಾಮಾನ್ಯ ಎಂಬಂತಾಗಿದೆ. ಸಂಚಾರ ನಿರ್ವಹಣೆಯಲ್ಲಿ ಪೊಲೀಸರು ಸಮರ್ಥವಾಗಿ ಕಾರ್ಯ ನಿರ್ವಹಿಸಲು ತೆಗೆದುಕೊಳ್ಳಬಹುದಾದ ಕ್ರಮಗಳೇನು?

ವಿಷ್ಣುವರ್ಧನ್: ಇದನ್ನು ನಾನೂ ಕೂಡ ಗಮನಿಸಿದ್ದೇನೆ. ವಾಹನ ನಿಲುಗಡೆ ಇರುವ ಸ್ಥಳದಲ್ಲಿಯೇ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಬೇಕು. ಮೈಸೂರು ಪ್ರವಾಸಿ ತಾಣವಾದ ಕಾರಣ ಪ್ರತಿನಿತ್ಯ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ಹೀಗಾಗಿ ಸಹಜವಾಗಿ ಕೆಲವೊಂದು ಲೋಪಗಳು ಆಗುತ್ತವೆ. ಸುಗಮ ಸಂಚಾರ ಹಾಗೂ ಸಂಚಾರ ನಿಯಮ ಉಲ್ಲಂ ಘನೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು

ಆಂದೋಲನ: ಆಯುಕ್ತರಾಗಿ ಮೈಸೂರಿಗರಿಗೆ ನಿಮ್ಮ ಸಂದೇಶವೇನು?

ಎನ್.ವಿಷ್ಣುವರ್ಧನ್: ಸಾರ್ವಜನಿಕರ ಸಹಕಾರವಿದ್ದಲ್ಲಿ ಅಪರಾಧಗಳನ್ನು ತಡೆಗಟ್ಟಬಹುದು. ಜನರಲ್ಲಿ ಅರಿವು ಮೂಡಿದರೆ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ತಡೆಯಬಹುದು. ಮೈಸೂರು ತನ್ನ ಸಂಸ್ಕೃತಿ ಹಾಗೂ ಪರಂಪರೆಯಿಂದ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಅದರ ಘನತೆ ಗೌರವವನ್ನು ಉಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ನಾವು ಸದಾ ಜನರೊಂದಿಗೆ ಇರುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.

 

 

Tags:
error: Content is protected !!