Mysore
25
broken clouds

Social Media

ಬುಧವಾರ, 18 ನವೆಂಬರ್ 2026
Light
Dark

ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗಿದ ಉದ್ಯಾನ

ಹೆಚ್.ಡಿ.ಮಣಿಕಂಠ ನಾಯಕ್

ಯಳಂದೂರು ಪಟ್ಟಣ ಪಂಚಾಯಿತಿ ಎದುರಿನ ಉದ್ಯಾನದ ಅವ್ಯವಸ್ಥೆ ಸರಿಪಡಿಸಲು ಆಗ್ರಹ 

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿ ಎದುರಿನ ಉದ್ಯಾನ ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಹಾಗೂ ಕಸದ ರಾಶಿಯಿಂದ ತುಂಬಿಕೊಂಡಿದ್ದು, ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ.

ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಉದ್ಯಾನದ ಇಂದಿನ ದುಸ್ಥಿತಿ ಪಟ್ಟಣ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉದ್ಯಾನವನದ ಸುತ್ತಮುತ್ತ ಪೊಲೀಸ್ ಠಾಣೆ, ಇಂದಿರಾ ಕ್ಯಾಂಟೀನ್, ವಸತಿ ಗೃಹ, ಆಶ್ರಯ ಬಡಾವಣೆ ಹಾಗೂ ಪ್ರವಾಸಿ ಮಂದಿರ ಸೇರಿದಂತೆ ಪ್ರಮುಖ ಸ್ಥಳಗಳಿವೆ. ಪ್ರತಿನಿತ್ಯ ನೂರಾರು ಜನರು, ಅಧಿಕಾರಿಗಳು ಹಾಗೂ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲಿರುವ ಉದ್ಯಾನವನವೇ ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣ ಪಂಚಾಯಿತಿ ಕಚೇರಿ ಎದುರಿನ ಉದ್ಯಾನವನ್ನು ತಕ್ಷಣ ಸ್ವಚ್ಛಗೊಳಿಸಿ, ಗಿಡಗಂಟಿ ತೆರವುಗೊಳಿಸಿ, ಮುರಿದುಹೋಗಿರುವ ಆಸನಗಳನ್ನು ದುರಸ್ತಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರಗತಿಪರ ಸಂಘಟನೆಗಳವರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

” ಪಟ್ಟಣ ಪಂಚಾಯಿತಿ ಕಚೇರಿ ಎದುರಿನ ಉದ್ಯಾನವನದ ಸ್ಥಿತಿಯೇ ಹೀಗಿದ್ದರೆ ಪಟ್ಟಣದ ಇತರೆ ಉದ್ಯಾನವನಗಳ ಪರಿಸ್ಥಿತಿ ಹೇಗಿರಬಹುದು? ಇಂದಿರಾ ಕ್ಯಾಂಟೀನ್ಗೆ ಬರುವ ಜನರು ಉದ್ಯಾನದ ಸುತ್ತಲಿನ ಅವ್ಯವಸ್ಥೆ ಕಂಡು ಮುಜುಗರ ಅನುಭವಿಸುವಂತಾಗಿದೆ. ಸಂಜೆ ವೇಳೆ ಮಕ್ಕಳನ್ನು ಉದ್ಯಾನವನಕ್ಕೆ ಕಳುಹಿಸಲು ಪೋಷಕರು ಭಯಪಡುವ ಪರಿಸ್ಥಿತಿಯಿದೆ. ಪೊದೆಗಳಲ್ಲಿ ಹಾವುಗಳಿರುವ ಆತಂಕವಿದೆ.”

ರಘು, ಪಪಂ ಮಾಜಿ ನಾಮನಿರ್ದೇಶಿತ ಸದಸ್ಯ

” ಉದ್ಯಾನವನದ ದುಸ್ಥಿತಿ ಕೇವಲ ಸ್ವಚ್ಛತೆಯ ಸಮಸ್ಯೆಯಲ್ಲ. ಇದು ಪಟ್ಟಣದ ಗೌರವದ ಪ್ರಶ್ನೆಯಾಗಿದೆ. ಪ್ರವಾಸಿ ಮಂದಿರಕ್ಕೆ ಆಗಮಿಸುವ ಹೊರಗಿನ ಅಧಿಕಾರಿಗಳು ಹಾಗೂ ಪ್ರವಾಸಿಗರು ಮೊದಲು ಕಾಣುವ ಸ್ಥಳಗಳಲ್ಲಿ ಇದೂ ಒಂದಾಗಿದೆ. ಇಂತಹ ಅವ್ಯವಸ್ಥೆ ಪಟ್ಟಣದ ಹೆಸರಿಗೆ ಧಕ್ಕೆ ತರುತ್ತಿದೆ. ಉದ್ಯಾನವನ ನಿರ್ಮಾಣದ ಜತೆಗೆ ಅದರ ನಿರ್ವಹಣೆಗೂ ಆದ್ಯತೆ ನೀಡಬೇಕು.”

ಬಳೆಪೇಟೆ ವರದರಾಜು, ಅಧ್ಯಕ್ಷರು, ಕರ್ನಾಟಕ ಕಾವಲು ಪಡೆ

” ನಾನು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಪಟ್ಟಣದ ಎಲ್ಲಾ ಉದ್ಯಾನವನಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ, ಯಳಂದೂರನ್ನು ಸುಂದರ ಪಟ್ಟಣವನ್ನಾಗಿ ಮಾಡಲು ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಲಾಗುವುದು.”

ಆರ್.ಹೇಮಂತ್ ರಾಜ್, ಮುಖ್ಯಾಧಿಕಾರಿ, ಪಪಂ

 

 

Tags:
error: Content is protected !!