Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಜಿಪಂ, ತಾಪಂ ಚುನಾವಣೆಗೆ ಈಗಿನಿಂದಲೇ ಕಾರ್ಯತಂತ್ರ!

ಕೋಟೆ: ಅಭ್ಯರ್ಥಿ ಆಯ್ಕೆ, ಮೀಸಲಾತಿ ವಿಚಾರದಲ್ಲಿ ಸಕ್ರಿಯರಾದ ಕಾಂಗ್ರೆಸ್, ಬಿಜೆಪಿ, ಜಾ.ದಳ ಮುಖಂಡರು

ಮಂಜು ಕೋಟೆ 

ಎಚ್.ಡಿ.ಕೋಟೆ: ಏಪ್ರಿಲ್, ಮೇ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಕಾಂಗ್ರೆಸ್, ಜಾ.ದಳ, ಬಿಜೆಪಿ ಮುಖಂಡರು ಪೈಪೋಟಿಯಿಂದ ಚುನಾವಣೆಯ ಕಾರ್ಯ ತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

ಜಿಪಂ, ತಾಪಂಗಳಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಉದ್ದೇಶದಿಂದ ಮುಖಂಡರು ಸಕ್ರಿಯ ರಾಜಕಾರಣದಲ್ಲಿ ತೊಡಗಿರುವುದು ಕಂಡುಬರುತ್ತಿದೆ.

ಆಕಾಂಕ್ಷಿಗಳು ತಮ್ಮ ಸ್ಪರ್ಧೆ ಮತ್ತು ಸಿಗಬಹುದಾದ ಮೀಸಲಾತಿಯ ಬಗ್ಗೆ ಬೆಂಬಲಿಗರು, ಕಾರ್ಯಕರ್ತರ ಜೊತೆ ಚರ್ಚಿಸುತ್ತಿದ್ದಾರೆ.

ಕೋಟೆ ಕ್ಷೇತ್ರದಲ್ಲಿ ಒಟ್ಟು ೬ ಜಿಪಂ ಮತ್ತು ೩೯ ತಾಪಂ ಕ್ಷೇತ್ರಗಳಿದ್ದು, ಇದರಲ್ಲಿ ಜಿಪಂ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಖಂಡರು ಮತ್ತು ಕಾರ್ಯಕರ್ತರು ಪೈಪೋಟಿಯ ಮೂಲಕ ತೆರೆಮರೆಯಲ್ಲಿ ಕಾರ್ಯತಂತ್ರ ನಡೆಸುತ್ತಿದ್ದಾರೆ.

೬ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ೨ ಕ್ಷೇತ್ರಗಳಲ್ಲಿ ಸಾಮಾನ್ಯ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮೀಸಲಾತಿ ಪ್ರಕಟವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದರಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನಗಳು ಲಭಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆ ಪಕ್ಷದವರ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ಮಾಡಿಸುವ ಕೆಲಸದಲ್ಲಿ ಆಡಳಿತ ಪಕ್ಷದವರು ತೊಡಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮೀಸಲಾತಿ ಮಾಡಿಸಿ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಮುಂದಾಗಿದ್ದು, ಈಗಾಗಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಬಳಿ ಮೊರೆ ಹೋಗುತ್ತಿದ್ದಾರೆ

ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ತಾಪಂ ಮತ್ತು ಜಿಪಂ ಚುನಾವಣೆಗಳು ಪ್ರತಿಷ್ಠೆ ಮತ್ತು ಸವಾಲಾಗಿದ್ದು, ಮೀಸಲಾತಿ ಮತ್ತು ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಬಹಳಷ್ಟು ಸಕ್ರಿಯವಾಗಿದ್ದಾರೆ.

ಬಿಜೆಪಿ ಮತ್ತು ಜಾ.ದಳ ಪಕ್ಷದವರಿಗೆ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಮತ್ತು ಸಂಘಟನೆ ಕ್ಷೀಣವಾಗುತ್ತಿರುವುದರಿಂದ ಪ್ರಕಟಗೊಳ್ಳುವ ಮೀಸಲಾತಿಯನ್ನು ಗಮನಿಸಿಕೊಂಡು ಬಹಳ ಜಾಗ್ರತೆಯಿಂದ ಕಾಂಗ್ರೆಸ್‌ಗೆ ಪೈಪೋಟಿ ಕೊಡುವಂತಹಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಜಾ.ದಳ ಮತ್ತು ಬಿಜೆಪಿ ಪ್ರಮುಖರಾದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಕೆ.ಎಂ.ಕೃಷ್ಣನಾಯಕ, ಶಂಭುಗೌಡ, ಗುರುಸ್ವಾಮಿ, ರಾಜೇಂದ್ರ, ಗೋಪಾಲ ಸ್ವಾಮಿ, ಮತ್ತಿತರರು ಸಕ್ರಿಯರಾಗಿದ್ದಾರೆ. ಸ್ಥಳೀಯ ಚುನಾವಣೆ ಆಗಿರುವುದರಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜಾ.ದಳ ಪಕ್ಷಗಳ ತಾಲ್ಲೂಕು ಮತ್ತು ಜಿಲ್ಲೆಯ ವರಿಷ್ಠರಿಗೆ ಇದು ಸವಾಲು ಮತ್ತು ಪ್ರತಿಷ್ಠೆಯಾಗಿರುವ ಜತೆಗೆ ಮೀಸಲಾತಿ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಬಹಳಷ್ಟು ಬದಲಾವಣೆಯಾಗಿ ಪಕ್ಷಾಂತರ ಪರ್ವ ನಡೆಯಬಹುದು. ಆ ಮೂಲಕ ಚುನಾವಣಾ ಕಣ ರಂಗೇರಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

” ರಾಜ್ಯ ಸರ್ಕಾರ ಕೋಟೆ ಕ್ಷೇತ್ರದ ೬ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯನ್ನು ನಿಗದಿಪಡಿಸಿ ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಲು ಮುಂದಾಗಿದ್ದು, ಮೀಸಲಾತಿಯ ಬಗ್ಗೆ ಕೆಲವೊಂದು ಬದಲಾವಣೆ ಆಗಬೇಕಾಗಿರುವುದರಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ.”

-ಅನಿಲ್ ಚಿಕ್ಕಮಾದು, ಶಾಸಕರು

Tags: