Mysore
30
overcast clouds

Social Media

ಬುಧವಾರ, 28 ಅಕ್ಟೋಬರ್ 2026
Light
Dark

ಕುಶಾಲನಗರದಲ್ಲಿ ಪಾರ್ಕಿಂಗ್ ಕಿರಿಕಿರಿ

ಕೆ.ಬಿ. ಶಂಶುದ್ದೀನ್

‘ನೋ ಪಾರ್ಕಿಂಗ್’ ಫಲಕವಿದೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯಿಲ್ಲ 

ಕುಶಾಲನಗರ: ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ವಾಹನ ನಿಲುಗಡೆಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಸಮೀಪದ ಮುಖ್ಯ ರಸ್ತೆಯಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಲಾಗಿದ್ದರೂ, ಸಾರ್ವಜನಿಕರಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದಿರುವುದು ವಾಹನಸವಾರರು ಹಾಗೂ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೆಡೆ ಸಂಚಾರ ನಿಯಮಗಳ ಪಾಲನೆಯ ಅನಿವಾರ್ಯತೆ, ಮತ್ತೊಂದೆಡೆ ವಾಹನ ನಿಲುಗಡೆಗೆ ಸ್ಥಳವಿಲ್ಲದ ಸಂಕಷ್ಟ. ಇವೆರಡರ ನಡುವೆ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಕುಶಾಲನಗರದ ಹೃದಯಭಾಗದಲ್ಲಿರುವ ಈ ರಸ್ತೆ ಸದಾ ಜನದಟ್ಟಣೆ ಹಾಗೂ ವಾಹನ ಸಂಚಾರದಿಂದ ಕೂಡಿರುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿಗಳು, ಹೋಟೆಲ್ಗಳು ಮತ್ತು ಬ್ಯಾಂಕ್‌ಗಳಿಗೆ ಆಗಮಿಸುವ ಗ್ರಾಹಕರು ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುವಂತಾಗಿದೆ. ಕೆಲವರು ವಾಹನ ನಿಲ್ಲಿಸಲು ಸಾಧ್ಯವಾಗದೆ ವಾಪಸ್ ತೆರಳುತ್ತಿದ್ದು, ಇದರಿಂದ ವ್ಯಾಪಾರ-ವಹಿವಾಟು ಕುಂಠಿತಗೊಳ್ಳುತ್ತಿದೆ ಎಂದು ಸ್ಥಳೀಯ ವರ್ತಕರು ಅಳಲು ತೋಡಿಕೊಂಡಿದ್ದಾರೆ.

ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ಸಾರ್ವಜನಿಕರು ಸಂಚಾರ ಪೊಲೀಸರ ದಂಡ ಅಥವಾ ವಾಹನ ಜಪ್ತಿಯ ಭೀತಿಯನ್ನು ಎದುರಿಸುತ್ತಿದ್ದಾರೆ. ವಾಹನ ನಿಲುಗಡೆಗೆ ಸ್ಥಳ ಹುಡುಕುತ್ತಾ ರಸ್ತೆಯಲ್ಲಿ ನಿಧಾನವಾಗಿ ಚಲಿಸುವ ವಾಹನಗಳಿಂದ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ.

ಮುಖ್ಯ ರಸ್ತೆಯ ಬದಿಯಲ್ಲಿರುವ ಚರಂಡಿಗಳ ಸ್ಲ್ಯಾಬ್‌ಗಳು ಹಾಳಾಗಿದ್ದು, ಪಾದಚಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಚರಿಸುವಾಗ ಗುಂಡಿಗೆ ಬೀಳುವ ಅಪಾಯವಿದೆ. ವಾಹನಗಳನ್ನು ನಿಲುಗಡೆ ಮಾಡುವ ಸಂದರ್ಭದಲ್ಲಿಯೂ ಕೆಲವು ವಾಹನಗಳು ಗುಂಡಿಗೆ ಬಿದ್ದಿರುವ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಪುರಸಭೆಯ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಪಟ್ಟಣ ವೇಗವಾಗಿ ಬೆಳೆಯುತ್ತಿದ್ದರೂ ಹೃದಯಭಾಗದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ವಾಹನ ಸವಾರರು ಹಾಗೂ ವರ್ತಕರಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೋ ಪಾರ್ಕಿಂಗ್ ಫಲಕ ಅಳವಡಿಸಿ ದಂಡ ವಿಧಿಸುವುದಕ್ಕಿಂತ ಮೊದಲು ಸಾರ್ವಜನಿಕರಿಗೆ ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಕುಶಾಲನಗರ ಪುರಸಭೆ ಹಾಗೂ ಸ್ಥಳೀಯ ಸಂಚಾರ ಪೊಲೀಸರು ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪಾರ್ಕಿಂಗ್ ನಿರ್ಬಂಧಗಳನ್ನು ಜಾರಿಗೊಳಿಸುವ ಮೊದಲು ಸೂಕ್ತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಫಲಕ ಅಳವಡಿಸಬೇಕು. ಜೊತೆಗೆ ಹಾಳಾಗಿರುವ ಚರಂಡಿ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸಿ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

” ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ಈ ಬಗ್ಗೆ ಲಿಖಿತ ದೂರು ಬಂದಿರುವುದಿಲ್ಲ. ದೂರು ಬಂದಲ್ಲಿ ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಲಾಗುವುದು.”

-ಗಿರೀಶ್, ಮುಖ್ಯಾಧಿಕಾರಿ, ಕುಶಾಲನಗರ ಪುರಸಭೆ

” ವಾಹನ ನಿಲುಗಡೆ ನಿಷೇಧ ಫಲಕ ಅಳವಡಿಸುವುದಕ್ಕೂ ಮುನ್ನ ಪಾರ್ಕಿಂಗ್ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ನೋ ಪಾರ್ಕಿಂಗ್ ಅಳವಡಿಸಿದರೇ ಎಲ್ಲರಿಗೂ ತೊಂದರೆಯಾಗುತ್ತದೆ. ಕುಶಾಲನಗರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ದೂರದೃಷ್ಟಿಯೊಂದಿಗೆ ಪುರ ಸಭೆ, ಪೊಲೀಸರು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.”

-ನಾಗೇಶ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು, ಕುಶಾಲನಗರ

” ವೇಗವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಹಳಷ್ಟು ವರ್ಷಗಳಿಂದ ಇದೆ. ಸರ್ಕಲ್‌ನ ಬಳಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದ್ದಾರೆ. ಇದರಿಂದ ವಾಹನ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಪಾರ್ಕಿಂಗ್ ಇಲ್ಲದೇ ವ್ಯಾಪಾರವೂ ಕುಂಠಿತಗೊಂಡಿದೆ. ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ, ಬೇರೆಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವೇ ಅದೇ ಜಾಗದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು.”

-ಎಸ್.ಆದಂ, ತಾಲ್ಲೂಕು ಅಧ್ಯಕ್ಷರು, ಅಂಬೇಡ್ಕರ್ ಜನಪರ ವೇದಿಕೆ , ಕುಶಾಲನಗರ

 

 

Tags:
error: Content is protected !!