Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಪುಷ್ಪದಲ್ಲಿ ಅರಳಿದ ಓಂಕಾರೇಶ್ವರ ದೇವಾಲಯ

ಪುನೀತ್‌

ಮಡಿಕೇರಿ: ಜಿಲ್ಲೆಯ ಪ್ರಮುಖ ಆಕರ್ಷಣೆ ಮಡಿಕೇರಿ ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಓಂಕಾರೇಶ್ವರ ದೇವಾಲಯದ ಮಾದರಿ ಗಮನ ಸೆಳೆಯಲಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಭರದ ಸಿದ್ಧತೆ ನಡೆಯುತ್ತಿದೆ.

ಉದ್ಯಾನದಲ್ಲಿ ಪ್ರತಿ ಬಾರಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿಯೂ ಒಂದೊಂದು ಮಾದರಿಯನ್ನು ಮಾಡಲಾಗುತ್ತದೆ. ಅದರಂತೆ ಈ ಬಾರಿ ಓಂಕಾರೇಶ್ವರ ದೇವಾಲಯದ ಮಾದರಿ ಯನ್ನು ಹೂಗಳಿಂದಲೇ ನಿರ್ಮಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಈಬಾರಿಯ ಫ್ಲವರ್ ಶೋ ಮೂರು ದಿನಗಳ ಬದಲಾಗಿ ನಾಲ್ಕು ದಿನಗಳ ಕಾಲ ನಡೆಯಲಿದ್ದು, ನಾಲ್ಕುದಿನ ಗಳು ಬಾಡದೇ ಇರುವ ವಿಶೇಷ ಹೂವುಗಳನ್ನೇ ಈ ಮಾದ ರಿಗೂ ಬಳಸಲಾಗುತ್ತಿರುವುದು ವಿಶೇಷ.

ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಉಸ್ತುವಾರಿ ಸಚಿವರ ಲಭ್ಯತೆ ನೋಡಿಕೊಂಡು ದಿನಾಂಕ ನಿಗದಿಪಡಿಸಲು ತೀರ್ಮಾನಿಸ ಲಾಗಿದೆ. ರಾಜಾಸೀಟ್ ಉದ್ಯಾನವನದಲ್ಲಿ ಈಗಾಗಲೇ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದ್ದು, ಜ. ೨೪ ಅಥವಾ ೨೫ರಂದು ಉದ್ಘಾಟನೆಯಾಗುವ ಸಾಧ್ಯತೆಯಿದೆ.

೧೨ ಸಾವಿರ ಹೂ ಕುಂಡ, ೨೫ ಸಾವಿರ ಹೂ:
ಫ್ಲವರ್ ಶೋ ಗಾಗಿ ಈಗಾಗಲೇ ರಾಜಾಸೀಟ್‌ನಲ್ಲಿ ೧೨ ಸಾವಿರ ಹೂಕುಂಡ ಗಳಲ್ಲಿ ವಿಶೇಷ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಇದರೊಂದಿಗೆ ಪಾತಿ(ಬೆಡ್)ಯಲ್ಲಿಯೂ ಅಂದಾಜು ೨೫ ಸಾವಿರ ಹೂವಿನ ಗಿಡಗಳನ್ನು ಬೆಳೆಯಲಾಗುತ್ತಿದೆ. ಒಟ್ಟಾರೆ ಉದ್ಯಾನವನದಲ್ಲಿ ಅಂದಾಜು ೩೫ ರಿಂದ ೪೦ ನಾನಾ ತಳಿಗಳ ಹೂವಿನ ಗಿಡಗಳನ್ನು ಫಲಪುಷ್ಪ ಪ್ರದರ್ಶನಕ್ಕಾಗಿಯೇ ವಿಶೇಷವಾಗಿ ಬೆಳೆಯಲಾಗಿದೆ.

ಝೇಂಕಾರ ಜೇನು: ರಾಜ್ಯದಲ್ಲಿ ಉತ್ಪಾದನೆಯಾಗುವ ಜೇನನ್ನು ತೋಟಗಾರಿಕಾ ಇಲಾಖೆಯಿಂದ ಝೇಂಕಾರ ಎಂಬ ಬ್ರಾಂಡ್‌ನಡಿ ಮಾರಾಟ ಮಾಡಲು ಇತ್ತೀಚೆಗೆ ತೀರ್ಮಾನಿಸಲಾಗಿದ್ದು, ಈ ಝೇಂಕಾರ ಜೇನಿನ ಪ್ರಚಾರವನ್ನು ಪ್ರಮುಖವಾಗಿಟ್ಟುಕೊಂಡು ಫ್ಲವರ್ ಶೋ ಏರ್ಪಡಿಸಲಾಗುತ್ತಿದೆ. ಝೇಂಕಾರ ಬ್ರಾಂಡ್‌ನಡಿ ಕೊಡಗಿನ ಜೇನನ್ನು ಕೂರ್ಗ್ ಹನಿ ಎಂಬ ಉಪ ಉತ್ಪನ್ನವಾಗಿ ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಇದು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ.

೮೦ಕ್ಕೂ ಹೆಚ್ಚು ಮಳಿಗೆಗಳು: ತೋಟಗಾರಿಕಾ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಒಟ್ಟು ೮೦ಕ್ಕೂ ಹೆಚ್ಚು ಮಳಿಗೆ ಗಳನ್ನು ರಾಜಾಸೀಟ್ ಮತ್ತು ಗಾಂಧಿ ಮೈದಾನದಲ್ಲಿ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯ ಕೃಷಿಕರು ಬೆಳೆದಿರುವ ವಿಶೇಷ ಉತ್ಪನ್ನಗಳ ಪ್ರದರ್ಶನ, ನರ್ಸರಿಗಳಲ್ಲಿ ನಾನಾ ಸಸಿಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ. ಇದರೊಂದಿಗೆ ಉದ್ಘಾಟನೆ ಅಥವಾ ಸಮಾರೋಪದ ದಿನದಂದು ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಚಿತ್ರಕಲೆ, ರಂಗೋಲಿ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲು ಚಿಂತಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್ ಮಾಹಿತಿ ನೀಡಿದ್ದಾರೆ.

ಸಚಿವರಿಂದ ಉದ್ಘಾಟಿಸಲು ತೀರ್ಮಾನ: ಕಳೆದ ಬಾರಿ ಜ. ೨೬ರ ಗಣರಾಜ್ಯೋತ್ಸವ ದಿನದಂದು ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಂಡು ಮೂರು ದಿನಗಳ ಕಾಲ ನಡೆದಿತ್ತು. ಆದರೆ, ಈ ಜ. ೨೬ ಭಾನುವಾರವಾಗಿರುವುದರಿಂದ ದಿನಾಂಕ ನಿಗದಿ ಪಡಿಸಲು ಸಮಸ್ಯೆಯಾಗಿದೆ. ಈ ಬಾರಿ ೪ ದಿನಗಳ ಕಾಲ ಪ್ರದರ್ಶನ ನಡೆಯಲಿದೆ. ಭಾನುವಾರ ಆರಂಭಗೊಂಡರೆ ಮುಂದಿನ ೩ ದಿನ ವಾರದ ದಿನಗಳಾಗುತ್ತದೆ. ಹೀಗಾಗಿ ೨೪ ಅಥವಾ ೨೫ರಂದೇ ಉದ್ಘಾಟನೆಯಾಗಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಗಣರಾಜ್ಯೋತ್ಸವಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರಿಂದಲೇ ಉದ್ಘಾಟನೆ ಮಾಡಿಸಲು ತೀರ್ಮಾನಿಸಲಾಗಿದ್ದು, ಅವರು ಗಣರಾಜ್ಯೋತ್ಸವಕ್ಕೂ ಮೊದಲೇ ಜಿಲ್ಲೆಗೆ ಬಂದರೆ ಜ. ೨೪ ಅಥವಾ ಜ. ೨೫ಕ್ಕೆ ಫ್ಲವರ್ ಶೋ ಉದ್ಘಾಟನೆಯಾಗಲಿದೆ.

ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ನಾನಾ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಜನವರಿ ಅಂತ್ಯದಲ್ಲಿ ಪ್ರದರ್ಶನ ನಡೆಯಲಿದ್ದು, ದಿನಾಂಕ ನಿಗದಿಯಾಗಬೇಕಿದೆ. ಈ ಬಾರಿ ಓಂಕಾರೇಶ್ವರ ದೇವಾಲಯದ ಮಾದರಿ ಫ್ಲವರ್ ಶೋನ ಆಕರ್ಷಣೆಯಾಗಿರಲಿದೆ. ಜತೆಗೆ ರಾಜ್ಯದ ಝೇಂಕಾರ ಜೇನಿನ ಉತ್ಪನ್ನಗಳ ಪ್ರದರ್ಶನ, ಮಾರಾಟ ವಿಶೇಷತೆಯಾಗಿದೆ. –ಯೋಗೇಶ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು

Tags: